ಭೀಮ್ ಆರ್ಮಿಯ ರ್ಯಾಲಿಗಳಿಗೆ ಅವಕಾಶ ನೀಡುವಂತೆ ಪೊಲೀಸರಿಗೆ ಆದೇಶಿಸಲು ಬಾಂಬೆ ಹೈಕೋರ್ಟ್ ನಕಾರ

Update: 2018-12-31 14:27 GMT

ಮುಂಬೈ,ಡಿ.31: ಪುಣೆ ನಗರದಲ್ಲಿ ಬಹಿರಂಗ ಸಭೆಗಳನ್ನು ನಡೆಸಲು ಭೀಮ್ ಆರ್ಮಿಗೆ ಅನುಮತಿ ನೀಡುವಂತೆ ಅಲ್ಲಿಯ ಪೊಲೀಸರಿಗೆ ಆದೇಶಿಸಲು ಬಾಂಬೆ ಉಚ್ಚ ನ್ಯಾಯಾಲಯವು ಸೋಮವಾರ ನಿರಾಕರಿಸಿತು.

ಭೀಮ್ ಆರ್ಮಿಯ ಪುಣೆ ಘಟಕಾಧ್ಯಕ್ಷ ದತ್ತಾ ಪೋಳ್ ಸಲ್ಲಿಸಿರುವ ಅರ್ಜಿಗೆ ಉತ್ತರವಾಗಿ ತಮ್ಮ ಅಫಿದಾವಿತ್ತನ್ನು ಸಲ್ಲಿಸುವಂತೆ ನ್ಯಾ.ಸಿ.ವಿ.ಭಡಂಗ್ ಅವರ ರಜಾಕಾಲ ಪೀಠವು ಪುಣೆ ಪೊಲೀಸರಿಗೆ ನಿರ್ದೇಶ ನೀಡಿತು.

ಭೀಮ್ ಆರ್ಮಿಯ ಸ್ಥಾಪಕ ಚಂದ್ರಶೇಖರ ಆಝಾದ್ ಅವರು ರವಿವಾರ ಸಂಜೆ ಪುಣೆಯ ಎಸ್‌ಎಸ್‌ಪಿಎಂಎಸ್ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಸಂಘಟಕರು ಅಗತ್ಯ ಅನುಮತಿಯನ್ನು ಪಡೆದುಕೊಳ್ಳಲು ವಿಫಲರಾಗಿದ್ದರಿಂದ ಅದನ್ನು ರದ್ದು ಮಾಡಲಾಗಿತ್ತು.

ಆಝಾದ್ ಅವರು ಸೋಮವಾರ ಸಾವಿತ್ರಿಬಾಯಿ ಫುಲೆ ಪುಣೆ ವಿವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದೂ ನಿಗದಿಯಾಗಿದೆಯಾದರೂ,ಈ ಕಾರ್ಯಕ್ರಮಕ್ಕಾಗಿ ತಾವು ಅನುಮತಿ ನೀಡಿಲ್ಲ ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ.

ಡಿ.30 ಮತ್ತು 31ರಂದು ಪುಣೆಯಲ್ಲಿ ಬಹಿರಂಗ ಸಭೆಗಳು ಮತ್ತು ಸಮಾವೇಶಗಳನ್ನು ಏರ್ಪಡಿಸಲು ಅನುಮತಿ ಕೋರಿ ಭೀಮ್ ಆರ್ಮಿಯು ಪುಣೆ ಪೊಲೀಸರಿಗೆ ಹಲವಾರು ಅರ್ಜಿಗಳನ್ನು ಸಲ್ಲಿಸಿತ್ತು. ಆದರೆ ಈವರೆಗೂ ಪೊಲೀಸರು ಅವುಗಳಿಗೆ ಉತ್ತರಿಸಿಲ್ಲ. ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಬಳಿಕ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಹೀಗಾಗಿ ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗಲಾಗಿದೆ ಎಂದು ಪೋಳ್ ಪರ ವಕೀಲರು ತಿಳಿಸಿದರು. ಆಝಾದ್‌ ಮತ್ತು ಭೀಮ್ ಆರ್ಮಿಯ ಮುಂಬೈ ಘಟಕಾಧ್ಯಕ್ಷ ಅಶೋಕ ಕಾಂಬ್ಳೆ ಅವರು ಪುಣೆಗೆ ಹೋಗದಂತಿರಲು ಅವರನ್ನು ಮುಂಬೈ ಪೊಲೀಸರು ಸ್ಥಾನಬದ್ಧತೆಯಲ್ಲಿರಿಸಿದ್ದರು ಎಂದು ಅರ್ಜಿಯಲ್ಲ್ಲಿ ಆರೋಪಿಸಿರುವ ಪೋಳ್,ಅಕ್ರಮ ಬಂಧನಕ್ಕಾಗಿ ರಾಜ್ಯ ಸರಕಾರದಿಂದ ಆಝಾದ್ ಮತ್ತು ಭೀಮ್ ಆರ್ಮಿಯ ಇತರ ಕಾರ್ಯಕರ್ತರಿಗೆ 10 ಲ.ರೂ. ಪರಿಹಾರವನ್ನು ಕೋರಿದ್ದಾರೆ. ಪೋಳ್ ಅವರ ಆರೋಪವನ್ನು ಪುಣೆ ಪೊಲೀಸರ ಪರ ವಕೀಲರು ನ್ಯಾಯಾಲಯದಲ್ಲಿ ನಿರಾಕರಿಸಿದರು.

ಯಾವುದೇ ಮಧ್ಯಂತರ ಆದೇಶವನ್ನು ಹೊರಡಿಸಲು ನಿರಾಕರಿಸಿದ ನ್ಯಾಯಾಲಯವು ಅಫಿದಾವತ್ತನ್ನು ಸಲ್ಲಿಸುವಂತೆ ಪುಣೆ ಪೊಲೀಸರಿಗೆ ನಿರ್ದೇಶ ನೀಡಿತು ಮತ್ತು ಮುಂದಿನ ವಿಚಾರಣೆಯನ್ನು ಜ.4ಕ್ಕೆ ನಿಗದಿಗೊಳಿಸಿತು.

ಭೀಮಾ-ಕೋರೆಗಾಂವ್ ಹಿಂಸಾಚಾರದ ಮೊದಲ ವಾರ್ಷಿಕಕ್ಕೆ ಮುನ್ನ ಶನಿವಾರ ಮುಂಬೈನಲ್ಲಿ ಮತ್ತು ರವಿವಾರ ಪುಣೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಭೀಮ್ ಆರ್ಮಿಯು ಯೋಜಿಸಿತ್ತು.

ಭೀಮಾ-ಕೋರೆಗಾಂವ್ ಯುದ್ಧದ 201ನೇ ವರ್ಷಚರಣೆಯಲ್ಲಿ ಪಾಲ್ಗೊಳ್ಳಲು ಜ.1ರಂದು ಭೀಮಾ-ಕೋರೆಗಾಂವ್ ಗ್ರಾಮಕ್ಕೆ ಭೇಟಿ ನೀಡಲು ಆಝಾದ್ ಉದ್ದೇಶಿಸಿದ್ದಾರೆ.

 ಜ.1ರಂದು ಲಕ್ಷಾಂತರ ಜನರು ಭೀಮಾ-ಕೋರೆಗಾಂವ್‌ನಲ್ಲಿಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವ ನಿರೀಕ್ಷೆಯಲ್ಲಿ ಪೊಲೀಸರು ವ್ಯಾಪಕ ಬಿಗಿ ಬಂದೋಬಸ್ತ್‌ನ್ನು ಏರ್ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News