ಗ್ರಾಹಕರಿಗೆ ಸಿಹಿಸುದ್ದಿ: ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಕಡಿತ

Update: 2018-12-31 15:31 GMT

ಹೊಸದಿಲ್ಲಿ, ಡಿ.31: ಸರಕಾರ ಗೃಹಬಳಕೆಯ ಅಡುಗೆ ಅನಿಲದ ದರವನ್ನು ಪ್ರತೀ ಸಿಲಿಂಡರ್‌ಗೆ 5.91 ರೂ. ಕಡಿತಗೊಳಿಸಿ ಬಳಕೆದಾರರಿಗೆ ಹೊಸ ವರ್ಷದ ಕೊಡುಗೆ ನೀಡಿದೆ.
ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ದರ ನಿರಂತರವಾಗಿ ಇಳಿಮುಖವಾಗುತ್ತಾ ಸಾಗುತ್ತಿರುವ ಪರಿಣಾಮ ಡಿಸೆಂಬರ್ ತಿಂಗಳಿನಲ್ಲಿ ಎರಡನೇ ಬಾರಿಗೆ ಎಲ್‌ ಪಿಜಿ ದರ ಕಡಿತವಾಗಿದೆ.

ದಿಲ್ಲಿಯಲ್ಲಿ ಸೋಮವಾರ ಮಧ್ಯರಾತ್ರಿಯಿಂದ 14.2 ಕಿ.ಗ್ರಾಂ. ತೂಕದ ಸಬ್ಸಿಡಿಯುಕ್ತ ಎಲ್‌ ಪಿಜಿ ಸಿಲಿಂಡರ್‌ ನ ಬೆಲೆ 494.99 ರೂ. ಆಗಿರುತ್ತದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ) ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ವೇಳೆ ಸಬ್ಸಿಡಿರಹಿತ ಎಲ್‌ ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 120.50 ರೂ. ಕಡಿತಗೊಳಿಸಲಾಗಿದ್ದು, ಡಿ.31ರ ಮಧ್ಯರಾತ್ರಿಯಿಂದ 14.2 ಕಿ.ಗ್ರಾಂ ತೂಕದ ಸಿಲಿಂಡರ್ ‌ಗಳ ಬೆಲೆ ದಿಲ್ಲಿಯಲ್ಲಿ 689 ರೂ. ಆಗಿರುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ ಪಿಜಿ ಬೆಲೆಯಲ್ಲಿ ಕುಸಿತ ಹಾಗೂ ಡಾಲರ್‌ ನೆದುರು ರೂಪಾಯಿ ಮೌಲ್ಯ ಹೆಚ್ಚಿರುವುದು ಎಲ್‌ ಪಿಜಿ ಬೆಲೆ ಕಡಿತಕ್ಕೆ ಕಾರಣ ಎಂದು ಐಒಸಿ ತಿಳಿಸಿದೆ.

ಡಿಸೆಂಬರ್ 1ರಂದು ಎಲ್‌ ಪಿಜಿ ಸಿಲಿಂಡರ್ ‌ನ ಬೆಲೆಯಲ್ಲಿ 6.52 ರೂ. ಕಡಿತವಾಗಿತ್ತು. ಆದರೆ ಈ ವರ್ಷದ ಜೂನ್‌ನಿಂದ ನವೆಂಬರ್‌ವರೆಗಿನ ಅವಧಿಯಲ್ಲಿ ನಿರಂತರ ಆರು ಬಾರಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಒಟ್ಟು 14.13 ರೂ. ಹೆಚ್ಚಳವಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಂಚ್‌ ಮಾರ್ಕ್ ಎಲ್‌ ಪಿಜಿ ದರಕ್ಕೆ ಅನುಗುಣವಾಗಿ ಪ್ರತೀ ತಿಂಗಳೂ ಸಬ್ಸಿಡಿ ಮೊತ್ತದಲ್ಲಿ ವ್ಯತ್ಯಾಸವಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ ಪಿಜಿ ದರ ಹೆಚ್ಚಳವಾದರೆ ಸರಕಾರ ಅಧಿಕ ಸಬ್ಸಿಡಿ ನೀಡುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಕಡಿಮೆಯಾದರೆ ಸಬ್ಸಿಡಿಯೂ ಕಡಿತಗೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News