×
Ad

ಉಡುಪಿ: ಚರ್ಚುಗಳಲ್ಲಿ ಪೂಜೆ ಸಹಿತ ಹೊಸ ವರ್ಷಕ್ಕೆ ಸ್ವಾಗತ

Update: 2018-12-31 21:47 IST

ಉಡುಪಿ, ಡಿ.31: ನೂತನ ವರ್ಷವನ್ನು ಉಡುಪಿ ಜಿಲ್ಲೆಯ ಕ್ರೈಸ್ತ ಬಾಂಧವರು ಪ್ರಾರ್ಥನೆ ಹಾಗೂ ಧನ್ಯವಾದ ಸಮರ್ಪಣೆಯೊಂದಿಗೆ ಸ್ವಾಗತಿಸಿದರು.
ಸೋಮವಾರ ಸಂಜೆಯ ವೇಳೆ ಇಗರ್ಜಿಗಳಿಗೆ ತೆರಳಿದ ಕ್ರೈಸ್ತ ಬಾಂಧವರು ಕಳೆದ ವರ್ಷ ಸರ್ವ ರೀತಿಯಲ್ಲಿ ತಮ್ಮನ್ನು ಕಾಪಾಡಿದ್ದಕ್ಕಾಗಿ ದೇವರಿಗೆ ಕತಜ್ಞತೆ ಸಲ್ಲಿಸಿದರು. ನೂತನ ವರ್ಷ ಪ್ರತಿಯೊಬ್ಬರಿಗೂ ಸಂತೋಷ ತರಲಿ ಎಂದು ಬೇಡಿದರು.

ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ತಮ್ಮ ಅಧಿಕೃತ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಸೋಮವಾರ ರಾತ್ರಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು. ನೂತನ ವರ್ಷದಲ್ಲಿ ದೇವರು ತೋರಿದ ಹಾದಿಯಲ್ಲಿ ನಡೆದು ವಿಶ್ವಶಾಂತಿಗಾಗಿ ಪ್ರತಿಯೊಬ್ಬರು ಪ್ರಾರ್ಥನೆ ಸಲ್ಲಿಸುವಂತೆ ಸಲಹೆ ನೀಡಿದರು. ವಿಶ್ವ ಶಾಂತಿಗಾಗಿ ನಮ್ಮಿಂದಾಗುವ ಪ್ರಯತ್ನವನ್ನು ಮಾಡುವಂತೆ ಕ್ರೈಸ್ತ ಸಮುದಾಯಕ್ಕೆ ಕರೆ ನೀಡಿದರು.

ಪವಿತ್ರ ಬಲಿ ಪೂಜೆಗೆ ಮುಂಚಿತವಾಗಿ ಕಳೆದು ಹೋಗಲಿರುವ 2018ನೇ ವರ್ಷದಲ್ಲಿ ದೇವರು ಮಾಡಿದ ಎಲ್ಲಾ ರೀತಿಯ ಉತ್ತಮ ಕೆಲಸಗಳಿಗಾಗಿ ದೇವರಿಗೆ ವಂದನೆಗಳನ್ನು ಅರ್ಪಿಸಿ ಪರಮ ಪ್ರಸಾದದ ವಿಶೇಷ ಆರಾಧನೆಯನ್ನು ನಡೆಸಲಾಯಿತು. 2019ರಲ್ಲಿ ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಲಾಯಿತು.

ಇದೇ ವೇಳೆ ಧರ್ಮಾಧ್ಯಕ್ಷರು ಯುವಜನರ ವರುಷಕ್ಕೆ ಧರ್ಮಪ್ರಾಂತದ ಮಟ್ಟದಲ್ಲಿ ಚಾಲನೆ ನೀಡಿದರು. ಮಿಲಾಗ್ರಿಸ್ ಕ್ಯಾಥೆಡ್ರಲ್‌ನ ರೆಕ್ಟರ್ ವಂ. ಡಾ. ಲಾರೆನ್ಸ್ ಡಿಸೋಜಾ, ಸಹಾಯಕ ಧರ್ಮಗುರು ವಂ. ಕ್ಯಾನ್ಯೂಟ್ ನೊರೋನ್ಹಾ ಹಾಗೂ ವಂ.ಲ್ಯಾನ್ಸಿ ಫೆರ್ನಾಂಡಿಸ್, ವಂ.ಜೋಸ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News