ಪ್ರವಾದಿ ನಿಂದನೆ: ಪುತ್ತೂರಿನಲ್ಲಿ ಪ್ರತಿಭಟನೆ
ಪುತ್ತೂರು, ಡಿ. 31: ಖಾಸಗಿ ವಾಹಿನಿಯೊಂದರ ನಿರೂಪಕ ಪ್ರವಾದಿಯವರ ಕುರಿತು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಸೋಮವಾರ ಇಲ್ಲಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ವಠಾರದ ಗಾಂಧೀಕಟ್ಟೆಯ ಬಳಿ ದ. ಕ. ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ತಾಲ್ಲೂಕು ಸಮಿತಿ ನೇತೃತ್ವದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪಿಎಫ್‍ಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಅವರು, ಇಸ್ಲಾಂ ಧರ್ಮೀಯವರು ಸ್ವಂತ ಶರೀರಕ್ಕಿಂತಲೂ ಪವಿತ್ರವಾಗಿ ಪ್ರವಾದಿಯವರನ್ನು ಪೂಜಿಸುತ್ತಾರೆ. ಪ್ರವಾದಿಯವರ ಕುರಿತು ಅವಹೇಳನ ಮಾಡಿದರೆ ನಾವು ಸುಮ್ಮನಿರುವುದಿಲ್ಲ ಎಂದು ಹೇಳಿದರು. ಕೆಲವು ಮಾಧ್ಯಮಗಳ ಮೂಲಕ ಮುಸ್ಲಿಂ ವಿರೋಧಿ ಷಡ್ಯಂತ್ರಗಳು ನಡೆಯುತ್ತಿವೆ. ಬಿಜೆಪಿ ಮತ್ತು ಸಂಘ ಪರಿವಾರದ ಅಜೆಂಡಾಗಳನ್ನು ಸೇರಿಸುವ ಯತ್ನ ಅವುಗಳ ಮೂಲಕ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಇದು ಮುಸಲ್ಮಾನರಿಗೆ ಮಾತ್ರ ಸಂಬಂಧಪಟ್ಟ ವಿಷಯವಲ್ಲ. ಸಮಾಜದ ಸಾಮರಸ್ಯಕ್ಕೆ ಸಂಬಂಧಪಟ್ಟ ವಿಚಾರವಾಗಿರುವುದರಿಂದ ಸರ್ಕಾರ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಸೆಸ್ಸೆಫ್ ಉಳ್ಳಾಲ ವಿಭಾಗದ ಅಧ್ಯಕ್ಷ ಮುನೀರ್ ಅಹ್ಮದ್ ಸಖಾಫಿ ಅವರು, ಇಸ್ಲಾಂ ಧರ್ಮ ಜಗತ್ತಿಗೆ ಶಾಂತಿಯ ಸಂದೇಶ ನೀಡಿದೆ. ಪ್ರವಾದಿಯವರು ಮಾನವೀಯತೆ, ಸಹಿಷ್ಣುತೆ, ಆದರ್ಶದಿಂದ ಬದುಕುವ ಪಾಠವನ್ನು ಇಸ್ಲಾಂ ಧರ್ಮಕ್ಕೆ ನೀಡಿದ್ದಾರೆ. ಪ್ರವಾದಿಯವರ ಅಹವೇಳನ ಮಾಡುವವರು ಮೊದಲು ಇಸ್ಲಾಂನ ಕುರಿತು ಅರಿತುಕೊಳ್ಳಬೇಕು. ತೆರೆದ ಪುಸ್ತಕದಂತಿರುವ ಇಸ್ಲಾಂ ಕುರಿತು ಅರಿತುಕೊಳ್ಳುವ ಮನಸ್ಸಿದ್ದರೆ ನಾವು ಅವರಿಗೆ ತಿಳಿಸಿಕೊಡುತ್ತೇವೆ ಎಂದರು.
ಎಸ್ಕೆಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಹುಸೈನ್ ದಾರಿಮಿ ರೆಂಜಿಲಾಡಿ ಅವರು ಮಾತನಾಡಿ, ಭಾರತದಲ್ಲಿನ 25 ಕೋಟಿ ಮುಸಲ್ಮಾನರು ದೇಶದ ಪ್ರಗತಿಯಲ್ಲಿ ತಮ್ಮದೇ ಕೊಡುಗೆಗಳನ್ನು ನೀಡುತ್ತಿದ್ದಾರೆ. ಧರ್ಮಕ್ಕೆ ಅವಹೇಳನ ಮಾಡುವ ಭಗವಾನ್ ಅಂತವರನ್ನೂ ನಾವು ಖಂಡಿಸುತ್ತೇವೆ. ಪ್ರವಾದಿಯವರಿಗೆ ಅವಹೇಳನ ಮಾಡಿದವವರನ್ನು ಬಂಧಿಸುವ ತನಕ ವಿರಮಿಸುವುದಿಲ್ಲ ಎಂದರು.
ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ ನೂರುದ್ದೀನ್ ಸಾಲ್ಮರ ಅವರು ಮಾತನಾಡಿ, ಎತ್ತಿಗೆ ಜ್ವರ ಬಂದರೆ ಎಮ್ಮಗೆ ಬರೆ ಹಾಕುವಂತಹ ಸ್ಥಿತಿ ದೇಶದಲ್ಲಿ ನಡೆಯುತ್ತಿದೆ. ಶಬರಿಮಲೆ ತೀರ್ಪು ಬಂದಾಗ ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಮಸೀದಿಗೆ ಅವಕಾಶ ನೀಡಬೇಕು ಎನ್ನುವ ವಿಚಾರ ಬಂದಿತ್ತು. ಭಗವಾನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಲು ಸಾಧ್ಯವಾಗದವರು ಪ್ರವಾದಿಯವರನ್ನೇ ದೂಷಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ ಮಾತನಾಡಿದರು. ಪುತ್ತೂರು ಕ್ಷೇತ್ರ ಎಸ್‍ಡಿಪಿಐ ಅಧ್ಯಕ್ಷ ಸಿದ್ದೀಕ್ ಪುತ್ತೂರು, ಪಿಎಫ್‍ಐ ಜಿಲ್ಲಾಧ್ಯಕ್ಷ ರಿಜ್ವಾನ್, ಯುವಜನ ಪರಿಷತ್ ತಾಲೂಕು ಸಮಿತಿ ಕಾರ್ಯದರ್ಶಿ ಶರೀಫ್ ಸಾಲ್ಮರ, ಕೋಶಾಧಿಕಾರಿ ಶಾಕೀರ್ , ಪುತ್ತೂರು ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ. ರಝಾಕ್ ಹಾಜಿ, ವಿವಿಧ ಮುಸ್ಲಿಂ ಸಂಘಟನೆಗಳ ಪ್ರಮುಖರಾದ ನೌಷದ್ ಬೊಳುವಾರು, ಸೂಫಿ ಬಪ್ಪಳಿಗೆ, ಅದ್ದು ಪಡೀಲು, ಸಲೀಂ ಮುರ, ಅಶ್ರಫ್ ಬಾವು, ಇಬ್ರಾಹಿಂ ಸಾಗರ್, ಹಸೈನಾರ್ ಬನಾರಿ, ರಶೀದ್ ಮುರ, ಅಝೀಝ್ ಪಡೀಲು, ಹಮೀದ್ ಕಬಕ, ಬಶೀರ್ ಕೂರ್ನಡ್ಕ, ಡಾ.ಇಸ್ಮಾಯಿಲ್,ಇಬ್ರಾಹಿಂ ಪರ್ಪುಂಜ, ಖಾದರ್ ಹಾಜಿ ಕೂರ್ನಡ್ಕ, ಹಂಝ ವಿದ್ಯಾಪುರ ಮತ್ತಿತರರು ಉಪಸ್ಥಿತರಿದ್ದರು.