ಬುಲಂದ್‌ಶಹರ್ ಹಿಂಸಾಚಾರ ಮುಸ್ಲಿಮರಲ್ಲಿ ಭಯ ಹುಟ್ಟಿಸುವ ಪ್ರಯತ್ನ: ಎನ್‌ಸಿಎಚ್‌ಆರ್‌ಒ

Update: 2018-12-31 17:48 GMT

ಹೊಸದಿಲ್ಲಿ, ಡಿ.31: ಇತ್ತೀಚೆಗೆ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದ ಹಿಂಸಾಚಾರ ಮುಸ್ಲಿಮರಲ್ಲಿ ಭಯ ಹುಟ್ಟಿಸುವ ನಿಟ್ಟಿನಲ್ಲಿ ನಡೆಸಿದ ಉದ್ದೇಶಿತ ಪ್ರಯತ್ನವಾಗಿತ್ತು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯ ಒಕ್ಕೂಟ(ಎನ್‌ಸಿಎಚ್‌ಆರ್‌ಒ) ತಿಳಿಸಿದ್ದು, ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದೆ.

ಬುಲಂದ್‌ಶಹರ್‌ನ ಸಿಯಾನಾ ಪ್ರದೇಶದಲ್ಲಿ ಡಿ.3ರಂದು ನಡೆದಿದ್ದ ಹಿಂಸಾಚಾರದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಹಾಗೂ ಸುಮಿತ್ ಕುಮಾರ್ ಎಂಬ ಸ್ಥಳೀಯ ಯುವಕನನ್ನು ಹತ್ಯೆ ಮಾಡಲಾಗಿತ್ತು. ಗೋ ಹತ್ಯೆ ನಡೆದಿದೆ ಎಂಬ ಗಾಳಿಸುದ್ದಿಯ ಹಿನ್ನೆಲೆಯಲ್ಲಿ ಗಲಭೆ ಸ್ಫೋಟಗೊಂಡಿತ್ತು.

ಐದು ರಾಜ್ಯಗಳಲ್ಲಿ(ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‌ಗಢ, ಮಿಝೋರಾಂ ಮತ್ತು ತೆಲಂಗಾಣ) ವಿಧಾನಸಭೆ ಚುನಾವಣೆ ನಡೆಯುವ ಸಂದರ್ಭ ಈ ಘಟನೆ ನಡೆದಿದೆ. ಮತದಾರರನ್ನು ಧ್ರುವೀಕರಿಸುವ ಉದ್ದೇಶದಿಂದ ಸಂಘಪರಿವಾರ ಶಕ್ತಿಗಳು ಈ ಯೋಜನೆ ರೂಪಿಸಿದ್ದವು. ಸಂಘಟನೆಯ ಸದಸ್ಯರನ್ನು ಒಳಗೊಂಡ ಸತ್ಯಶೋಧನಾ ಸಮಿತಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ವಾಸ್ತವಾಂಶದ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ನೀಡಿದ್ದಾರೆ ಎಂದು ಎನ್‌ಸಿಎಚ್‌ಆರ್ ತಿಳಿಸಿದೆ. ಅಲ್ಲದೆ ದ್ವೇಷದಿಂದ ನಡೆಸುವ ದುಷ್ಕೃತ್ಯವನ್ನು ತಡೆಯಲು ಹೊಸ ಕಾನೂನು ರಚಿಸಬೇಕು ಮತ್ತು ಗೋ ರಕ್ಷಣೆಯ ಹೆಸರಲ್ಲಿ ಶಸ್ತ್ರಗಳನ್ನು ಬಳಸುತ್ತಿರುವ ‘ಸೇನೆ’ಗಳು ಹಾಗೂ ಇತರ ಎಲ್ಲಾ ಸಂಘಗಳ ಮೇಲೆ ತಕ್ಷಣ ನಿಷೇಧ ವಿಧಿಸಬೇಕೆಂದು ಒತ್ತಾಯಿಸಿದೆ.

ಗೋರಕ್ಷಣೆಯನ್ನು ನೆಪವಾಗಿರಿಸಿಕೊಂಡು ಎಲ್ಲೆಡೆ ಅಶಾಂತಿ ಮತ್ತು ಗೊಂದಲ ಹುಟ್ಟಿಸುವ ಉದ್ದೇಶದಿಂದ ಹಿಂಸಾಚಾರ ನಡೆಸಲಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎನ್‌ಸಿಎಚ್‌ಆರ್‌ಒ ಸದಸ್ಯರು ಹೇಳಿದ್ದಾರೆ. ಬಜರಂಗದಳ ಮತ್ತು ಬಿಜೆಪಿ ಯುವಮೋರ್ಛಾದ ಮುಖಂಡರಾದ ಯೋಗೇಶ್ ರಾಜ್ ಮತ್ತು ಶಿಖರ್ ಅಗರ್‌ವಾಲ್ ಚಿಂಗ್ರಾವಟಿ ಪೊಲೀಸ್ ಠಾಣೆಯ ಬಳಿ ತಮ್ಮ ಬೆಂಬಲಿಗೊಂದಿಗೆ ಸೇರಿಕೊಂಡು ಗಲಭೆ ಎಬ್ಬಿಸಿ ಹಲವು ವಾಹನಗಳನ್ನು ಸುಟ್ಟುಹಾಕಿದ್ದಾರೆ. ಅಲ್ಲದೆ ಶೂಟೌಟ್ ನಡೆಸಿ ಪೊಲೀಸರತ್ತ ಕಲ್ಲೆಸೆದರು. ಇವರಿಗೆ ರಾಜಕೀಯ ವ್ಯಕ್ತಿಗಳ ರಕ್ಷಣೆ ಇರುವುದು ಇನ್‌ಸ್ಪೆಕ್ಟರ್‌ರನ್ನು ಹತ್ಯೆ ಮಾಡಿರುವ ಘಟನೆಯ ವೀಡಿಯೊ ನೋಡಿದಾಗ ಸ್ಪಷ್ಟವಾಗುತ್ತದೆ ಎಂದು ಸತ್ಯಶೋಧನಾ ಸಮಿತಿಯಲ್ಲಿದ್ದ ‘ಆಲ್ ಇಂಡಿಯಾ ಪೀಪಲ್ಸ್ ಫೋರಂ’ನ ಮನೋಜ್ ಸಿಂಗ್ ಹೇಳಿದ್ದಾರೆ.

ಬುಲಂದ್‌ಶಹರ್‌ನಂತಹ ಶಾಂತಿಯುತ ಪ್ರದೇಶದಲ್ಲಿ ಡಿ.3ರಂದು ನಡೆದ ಘಟನೆ ಮುಸ್ಲಿಂ ಸಮುದಾಯದವರಲ್ಲಿ ಭಯ ಹುಟ್ಟಿಸಲು ಸಂಘ-ಬಿಜೆಪಿ ಸಂಘಟನೆಗಳು ನಡೆಸಿರುವ ಉದ್ದೇಶಿತ ಪ್ರಯತ್ನವಾಗಿದೆ ಮತ್ತು ದಕ್ಷ ಅಧಿಕಾರಿಗಳ ಎದೆಗುಂದಿಸಲು ನಡೆಸಿರುವ ರಾಜಕೀಯ ಷಡ್ಯಂತ್ರದ ಒಂದು ಭಾಗವಾಗಿದೆ ಎಂದವರು ಹೇಳಿದ್ದಾರೆ.

  ಗೋ ಹತ್ಯೆ ನಡೆದಿರುವುದಕ್ಕೆ ಯಾವುದೇ ಕುರುಹು ದೊರೆತಿಲ್ಲ. ಘಟನೆಯ ಬಳಿಕ ಇಬ್ಬರು ಅಪ್ರಾಪ್ತ ಬಾಲಕರೂ ಸೇರಿದಂತೆ ಹಲವು ಅಮಾಯಕರನ್ನು ಬಂಧಿಸಲಾಗಿದೆ. ಆದರೆ ಪ್ರಮುಖ ಆರೋಪಿ ಬಜರಂಗದಳದ ಸ್ಥಳೀಯ ಮುಖಂಡ ಯೋಗೇಶ್ ರಾಜ್ ಆರಾಮವಾಗಿ ತಿರುಗಾಡಿಕೊಂಡಿದ್ದಾನೆ ಎಂದಿರುವ ಅವರು, ಗೋ ರಕ್ಷಣೆಯ ಹೆಸರಲ್ಲಿ ಅಂತರ್ಯುದ್ಧದ ರೀತಿಯ ಪರಿಸ್ಥಿತಿ ನಿರ್ಮಾಣವಾಗದಂತೆ ತಡೆಯಲು ಸೂಕ್ತ ಕಾನೂನು ಜಾರಿಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಮಧ್ಯೆ, ಯೋಗೇಶ್ ರಾಜ್ ನೀಡಿದ ದೂರಿನಂತೆ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದ ನಯಾಬನ್ಸ್ ಗ್ರಾಮದ ನಿವಾಸಿ ಸರ್ಫುದ್ದೀನ್, ತನ್ನನ್ನು ವಿನಾಕಾರಣ ಬಂಧಿಸಿ 16 ದಿನ ಜೈಲಿನಲ್ಲಿ ಇರಿಸಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ. ಗ್ರಾಮದಲ್ಲಿರುವ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷನಾಗಿರುವ ತನಗೆ ಈ ಹಿಂದೆ ಧ್ವನಿವರ್ಧಕ ಅಳವಡಿಸುವ ವಿಷಯದ ಬಗ್ಗೆ ಸಂಘಪರಿವಾರ ಗುಂಪಿನ ಮುಖಂಡನೊಬ್ಬ ಬೆದರಿಕೆ ಹಾಕಿದ್ದ ಎಂದೂ ಅವರು ತಿಳಿಸಿದ್ದಾರೆ.

 ಗೋಹತ್ಯೆ ನಡೆಸಿದ್ದಾರೆ ಎಂದು ಯೋಗೇಶ್ ರಾಜ್ ನೀಡಿದ್ದ ದೂರಿನಂತೆ ದಾಖಲಿಸಲಾಗಿರುವ ಎಫ್‌ಐಆರ್‌ನಲ್ಲಿ ಸರ್ಫುದ್ದೀನ್, 11 ಮತ್ತು 12 ವರ್ಷದ ಇಬ್ಬರು ಮಕ್ಕಳು ಹಾಗೂ ಅಸ್ತಿತ್ವದಲ್ಲಿಯೇ ಇಲ್ಲದ ವ್ಯಕ್ತಿಯ ಸಹಿತ 7 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News