ದಾಳಿಗೆ ಪಾಕಿಸ್ತಾನದ ಬ್ಯಾಟ್ ಯತ್ನ ಸೇನಾ ಪಡೆಯಿಂದ ವಿಫಲ

Update: 2018-12-31 18:04 GMT

ಶ್ರೀನಗರ, ಡಿ. 21: ಜಮ್ಮು ಹಾಗೂ ಕಾಶ್ಮೀರದ ನೌಗಾಂವ್ ವಲಯದಲ್ಲಿರುವ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಗಡಿ ಕಾರ್ಯಾಚರಣೆ ಪಡೆ (ಬಿಎಟಿ-ಬ್ಯಾಟ್)ಯ ಕಾರ್ಯಾಚರಣೆಯನ್ನು ಸೇನಾ ಪಡೆ ವಿಫಲಗೊಳಿಸಿದೆ ಹಾಗೂ ಇಬ್ಬರು ನುಸುಳುಕೋರರನ್ನು ಹತ್ಯೆಗೈದಿದೆ. ‘‘ನೌಗಾಂವ್ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿರುವ ಮುಂಚೂಣಿ ಠಾಣೆ ಮೇಲೆ ರವಿವಾರ ಮುಂಜಾನೆ ಬ್ಯಾಟ್ ನಡೆಸಿದ ಪ್ರಮುಖ ದಾಳಿಯನ್ನು ಸೇನೆ ವಿಫಲಗೊಳಿಸಿದೆ’’ ಎಂದು ಸೇನಾ ವಕ್ತಾರ ಹೇಳಿದ್ದಾರೆ.

ಗಡಿ ನಿಯಂತ್ರಣ ರೇಖೆಯ ಸಮೀಪದ ದಟ್ಟ ಕಾಡಿನ ಮೂಲಕ ನುಸುಳುಕೋರರು ಒಳ ನುಸುಳಲು ಪ್ರಯತ್ನಿಸಿದರು . ಅವರಲ್ಲಿ ಮೋರ್ಟಾರ್ ಹಾಗೂ ರಾಕೆಟ್ ಲಾಂಚರ್‌ನಂತಹ ಅತ್ಯಧಿಕ ಸಾಮರ್ಥ್ಯದ ಶಸ್ತ್ರಾಸ್ತ್ರಗಳು ಇದ್ದ ಎಂದು ಅವರು ತಿಳಿಸಿದ್ದಾರೆ.

ದಟ್ಟ ಕಾಡಿನಲ್ಲಿ ನುಸುಳುಕೋರರ ಚಲನವಲನವನ್ನು ಗಡಿ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಿದ್ದ ಭಾರತೀಯ ಸೇನೆ ಗುರುತಿಸಿತು. ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆ ಪ್ರತಿ ದಾಳಿ ನಡೆಸಿತು. ಈ ಗುಂಡಿನ ಚಕಮಕಿ ರಾತ್ರಿ ಪೂರ್ತಿ ಮುಂದುವರಿಯಿತು.

ಅನಂತರ ಸೇನಾ ಪಡೆ ದಟ್ಟ ಕಾಡಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿತು. ಈ ಸಂದರ್ಭ ಪಾಕಿಸ್ತಾನದ ಯೋಧರದ್ದು ಎಂದು ಹೇಳಬಹುದಾದ ಇಬ್ಬರು ನುಸುಳುಕೋರರ ಮೃತದೇಹ ಕಂಡು ಬಂದಿದೆ. ಅಲ್ಲದೆ, ಈ ಸ್ಥಳದಲ್ಲಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಕಡೆಯಿಂದ ಗುಂಡಿನ ದಾಳಿ ಹಾಗೂ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಇನ್ನು ಕೆಲವು ನುಸುಳುಕೋರರು ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News