ಹೊಸ ವರ್ಷಚಾರಣೆ ಸಂಭ್ರಮ: ಮಹಿಳೆಯೊಂದಿಗೆ ಅಸಭ್ಯ ವರ್ತನೆ; ಓರ್ವ ವಶಕ್ಕೆ

Update: 2019-01-01 13:07 GMT

ಬೆಂಗಳೂರು, ಜ.1: ಹೊಸ ವರ್ಷಚಾರಣೆ ಸಂಭ್ರಮದಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಓರ್ವನನ್ನು ಇಲ್ಲಿನ ಅಶೋಕನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಟೆಕ್ಕಿ ಹಾಗೂ ಆತನ ಪತ್ನಿ ಹೊಸ ವರ್ಷದ ಸಂಭ್ರಮಾಚರಣೆಯನ್ನು ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಅಸಭ್ಯವಾಗಿ ವರ್ತಿಸಿದ ಘಟನೆ ನಗರದ ರಿಚ್ಮಂಡ್ ವೃತ್ತದ ಬಳಿ ನಡೆದಿದೆ ಎಂದು ತಿಳಿದುಬಂದಿದೆ.

ಮೂಲತಃ ಬಿಹಾರದ ದಂಪತಿಗಳಾದ ಇವರು, ತಡರಾತ್ರಿ ಹೊಸ ವರ್ಷ ಸಂಭ್ರಮಾಚರಣೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಈ ವೇಳೆ ಗುಂಪಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಹಿಳೆಯ ಹಿಂಬದಿ ಸ್ಪರ್ಶಿಸಿದ್ದಾರೆ ಎನ್ನಲಾಗಿದೆ.

ಬಳಿಕ ಪತಿ ಕೃತ್ಯದ ಬಗ್ಗೆ ಪ್ರಶ್ನಿಸಿದ್ದಾನೆ. ಆದರೆ, ಕೃತ್ಯ ಪ್ರಶ್ನಿಸಿದ್ದಕ್ಕೆ ದುಷ್ಕರ್ಮಿಗಳು ಮಹಿಳೆಯ ಪತಿಗೆ ಥಳಿಸಿ, ಮೊಬೈಲ್ ಕಸಿದು ಬೆದರಿಕೆ ಹಾಕಿದ್ದಾರೆ. ಬಳಿಕ ದಂಪತಿ ಅಶೋಕ ನಗರ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲು ಮಾಡಿ, ಸದ್ಯ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ಅಶೋಕನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News