×
Ad

ಎಲ್ಲ ಮಕ್ಕಳಿಗೂ ಶಿಕ್ಷಣ ದೊರೆಯಲಿ: ಡಿಸಿಪಿ ಹನುಮಂತರಾಯ

Update: 2019-01-01 22:57 IST

ಮಂಗೂಳೂರು, ಜ.1: ಎಲ್ಲ ಮಕ್ಕಳಿಗೂ ಶಿಕ್ಷಣ ದೊರಕುವುದು ಇಂದಿನ ಅಗತ್ಯವಾಗಿದೆ. ಅಂತಹ ಶಿಕ್ಷಣವನ್ನು ನೀಡುವ ಕ್ರೆಸೆಂಟ್ ಶಿಕ್ಷಣ ಸಂಸ್ಥೆಯ ಸೇವೆ ಸ್ವಾಗತಾರ್ಹವಾದುದು. ಶಿಕ್ಷಣವು ಮಕ್ಕಳ ಮೂಲಭೂತ ಹಕ್ಕಾಗಿದೆ ಎಂದು ಡಿಸಿಪಿ ಹನುಮಂತರಾಯ ಹೇಳಿದರು.

ನಗರದ ಪುರಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕ್ರೆಸೆಂಟ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಜನಸಂಖ್ಯೆ ಗಣನೀಯ ಮಟ್ಟದಲ್ಲಿದ್ದು, ಎಲ್ಲ ಮಕ್ಕಳು ಶಿಕ್ಷಣ ಪಡೆಯಬೇಕು ಎನ್ನುವುದು ಆರ್‌ಟಿಇ ಉದ್ದೇಶವಾಗಿದೆ. ಸರಕಾರದಿಂದ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೆ ತರಲಾಗಿದೆ. ಯೋಜನೆಗಳ ಸದುಪಯೋಗವಾಗಲಿ ಎಂದು ತಿಳಿಸಿದರು.

ಪ್ರಾಥಮಿಕ, ಪ್ರೌಢ, ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಹಲವು ಶಿಕ್ಷಣ ಸಂಸ್ಥೆಗಳು ನೀಡುತ್ತಿದ್ದು, ಅದರಲ್ಲಿ ಕ್ರೆಸೆಂಟ್ ಆಂಗ್ಲ ಮಾಧ್ಯಮ ಶಾಲೆಯು ಉನ್ನತ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ದೇಶಕ್ಕೆ ಒಳ್ಳೆಯ ಹೆಸರನ್ನು ತಂದು ಆದರ್ಶ ಪ್ರಜೆಗಳಾಗಿ ಬಾಳಬೇಕು ಎಂದು ಸಲಹೆ ನೀಡಿದರು.

ಬಳಿಕ ಕ್ರೆಸೆಂಟ್ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಡಿಸಿಪಿ ಹನುಮಂತರಾಯ ಅವರಿಗೆ ಮೊಮೆಂಟೋವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್‌ಕೆಜಿ, ಪ್ರಾಥಮಿಕ, ಪ್ರೌಢ ಶಾಲಾ ವಿಭಾಗದಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಶಿಷ್ಯವೇತನ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರೆಸೆಂಟ್ ವೆಲ್ಫೇರ್ ಸೆಂಟರ್ ಅಧ್ಯಕ್ಷ ಬಿ.ಅಹ್ಮದ್ ಹಾಜಿ ಮೊಹಿಯುದ್ದೀನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅನುಪಮ ಮಾಸಿಕ ಪತ್ರಿಕೆಯ ಸಂಪಾದಕಿ ಶಹನಾಝ್ ಎಂ., ಕ್ರೆಸೆಂಟ್ ವೆಲ್ಫೇರ್ ಸೆಂಟರ್ ಕಾರ್ಯನಿರ್ವಾಹಕ ಅಧ್ಯಕ್ಷ ಸಿ.ಎ.ಜಮೀರ್ ಅಂಬರ್, ಉಪಾಧ್ಯಕ್ಷ ಅಡ್ವೊಕೇಟ್ ಸಾದುದ್ದೀನ್ ಸಲ್ಹಿ, ಪ್ರಧಾನ ಕಾರ್ಯದರ್ಶಿ ಎಂ.ಶರೀಫ್, ಜಂಟಿ ಕಾರ್ಯದರ್ಶಿಗಳಾದ ಮುಹಮ್ಮದ್ ಹಾರೀಸ್, ಮುಹಮ್ಮದ್ ಹನೀಫ್, ಖಜಾಂಚಿ ಅಡ್ವೊಕೇಟ್ ಬಿ.ಎಂ. ಬಶೀರ್ ಅಹ್ಮದ್, ಸಮಿತಿಯ ಸದಸ್ಯರಾದ ಕೆ.ಅಬ್ದುಲ್ ರಶೀದ್, ಮನ್ಸೂರ್ ಅಹ್ಮದ್, ಕೆ.ಮುಹಮ್ಮದ್ ಹಾರೀಸ್, ಬಿ.ಅಬೂಬಕರ್, ಬಿ.ಕೆ.ಇಮ್ತಿಯಾಝ್, ಉಸ್ಮಾನ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕ್ರೆಸೆಂಟ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ದುಆಗೈದರು. ಕ್ರೆಸೆಂಟ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಶೈಲಜಾ ಎಂ. ಶಾಲಾ ವಾರ್ಷಿಕ ವರದಿ ವಾಚಿಸಿದರು. ಶ್ರುತಿ ಹಾಗೂ ಸೌಮ್ಯಾ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲಾ ಶಿಕ್ಷಕಿ ವಾರಿಜಾಕ್ಷಿ ಸ್ವಾಗತಿಸಿದರು. ಸಯೀದಾ ಇಸ್ಮಾಯೀಲ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜಯಲಕ್ಷ್ಮಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News