ಹೊಸ ವರ್ಷದ ಮೊದಲ ದಿನ ಭಾರತದಲ್ಲಿ ಹುಟ್ಟಿದ ಮಕ್ಕಳೆಷ್ಟು ಗೊತ್ತೇ?

Update: 2019-01-02 03:52 GMT

ಹೊಸದಿಲ್ಲಿ, ಜ.2: ಹೊಸವರ್ಷದ ಮೊದಲ ದಿನ ಭಾರತ ಸುಮಾರು 70 ಸಾವಿರ ಮಕ್ಕಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದೆ!

ಜನವರಿ 1ರಂದು ಅತಿಹೆಚ್ಚು ಅಂದರೆ 69,944 ಮಕ್ಕಳು ಭಾರತದಲ್ಲಿ ಜನ್ಮ ಪಡೆದಿದ್ದಾರೆ ಎಂದು ಯುನಿಸೆಫ್ ಪ್ರಕಟಿಸಿದೆ. ಜಾಗತಿಕವಾಗಿ ಪ್ರತಿದಿನ ಸರಾಸರಿ 3.95 ಲಕ್ಷ ಮಕ್ಕಳು ಸೇರ್ಪಡೆಯಾಗುತ್ತಿದ್ದು, ಇದರಲ್ಲಿ ಭಾರತದ ಪಾಲು ಶೇಕಡ 18ರಷ್ಟಾಗಿದೆ. ಮಂಗಳವಾರ ಅತಿಹೆಚ್ಚು ಮಕ್ಕಳನ್ನು ಸ್ವಾಗತಿಸಿದ ದೇಶಗಳಲ್ಲಿ ಚೀನಾ (44,940), ನೈಜೀರಿಯಾ (25,685), ಪಾಕಿಸ್ತಾನ (15,112), ಇಂಡೋನೇಷ್ಯಾ (13,256) ಸೇರಿವೆ. ಅಮೆರಿಕ, ಕಾಂಗೊ, ಬಾಂಗ್ಲಾದೇಶ, ಇಥಿಯೋಪಿಯಾ ಹಾಗೂ ಬ್ರೆಝಿಲ್ ಕೂಡಾ ಅಗ್ರ 10ರ ಪಟ್ಟಿಯಲ್ಲಿವೆ.

"ನವಜಾತ ಶಿಶುಗಳಲ್ಲಿ ಹಲವು ಆರೋಗ್ಯ ಸಂಕೀರ್ಣತೆಯಿಂದಾಗಿ ಒಂದು ವರ್ಷ ಅಥವಾ ಒಂದು ದಿನ ಕೂಡಾ ಉಳಿಯುವುದಿಲ್ಲ. ಹೊಸ ವರ್ಷದ ಮೊದಲ ದಿನ ಹೆರಿಗೆ ಸಮಯದ ಸಮಸ್ಯೆ ಹಾಗೂ ಸೋಂಕಿನ ಕಾರಣದಿಂದಾಗಿ ಮೃತಪಡುವ ಮಕ್ಕಳ ರಕ್ಷಣೆಗೆ ಪಣ ತೊಡಬೇಕಾಗಿದೆ" ಎಂದು ಭಾರತದಲ್ಲಿ ಯುನಿಸೆಫ್ ಪ್ರತಿನಿಧಿಯಾಗಿರುವ ಡಾ.ಯಾಸ್ಮಿನ್ ಅಲಿ ಹಕ್ ಅಭಿಪ್ರಾಯಪಟ್ಟಿದ್ದಾರೆ.

2017ರಲ್ಲಿ ಸುಮಾರು 10 ಲಕ್ಷ ಮಕ್ಕಳು ಹುಟ್ಟಿದ ದಿನವೇ ಮೃತಪಟ್ಟಿದ್ದರೆ, 25 ಲಕ್ಷ ಮಕ್ಕಳು ಒಂದು ತಿಂಗಳಷ್ಟೇ ಉಳಿದಿದ್ದಾರೆ. ಭಾರತದಲ್ಲಿ ಶಿಶು ಮರಣ ಪ್ರಮಾಣ ಕಳೆದ ಕೆಲ ವರ್ಷಗಳಲ್ಲಿ ಗಣನೀಯವಾಗಿ ಇಳಿದಿದ್ದರೂ, ನವಜಾತ ಶಿಶುಗಳ ಮರಣ ಪ್ರಮಾಣ ಇಳಿಸುವುದು ಸವಾಲಾಗಿಯೇ ಉಳಿದಿದೆ ಎಂದು ಹಕ್ ಹೇಳಿದ್ದಾರೆ.

ಕೆಲ ಸರಳ ಕ್ರಮಗಳನ್ನು ಅನುಸರಿಸುವುದರಿಂದ ನವಜಾತ ಶಿಶುಗಳ ಮರಣ ತಪ್ಪಿಸಬಹುದು ಎನ್ನುವುದು ತಜ್ಞರ ಅಭಿಮತ. ನವಜಾತ ಶಿಶುವಿಗೆ ಮೊಲೆ ಹಾಲುಣಿಸುವುದು, ಶಿಶುವಿನ ತಂದೆ ಅಥವಾ ತಾಯಿಯ ದೇಹಸ್ಪರ್ಶವಾಗದಂತೆ ತಡೆಯುವುದು, ಅಗತ್ಯ ಔಷಧಿಗಳು ಮತ್ತು ಸಾಧನ ಸಲಕರಣೆಗಳನ್ನು ಒದಗಿಸುವುದು ಹಾಗೂ ಸ್ವಚ್ಛ, ಸುಸಜ್ಜಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಅಗತ್ಯ ಎಂದು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News