ಸಚಿನ್ ತೆಂಡುಲ್ಕರ್ ಕೋಚ್ ರಮಾಕಾಂತ್ ಅಚ್ರೇಕರ್ ನಿಧನ
ಮುಂಬೈ, ಜ.2: ಸಚಿನ್ ತೆಂಡುಲ್ಕರ್ ಅವರ ಗುರು, ಖ್ಯಾತ ಕ್ರಿಕೆಟ್ ಕೋಚ್ ರಮಾಕಾಂತ್ ಅಚ್ರೇಕರ್ ಬುಧವಾರ ಸಂಜೆ 6:30ರ ಸುಮಾರಿಗೆ ಮುಂಬೈನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.
1932ರಲ್ಲಿ ಜನಿಸಿರುವ ಅಚ್ರೇಕರ್ ಅವರು ತೆಂಡುಲ್ಕರ್ ವೃತ್ತಿಜೀವನ ರೂಪಿಸಲು ಪ್ರಮುಖ ಪಾತ್ರವಹಿಸಿದ್ದರು. ಅಚ್ರೇಕರ್ ಮುಂಬೈನ ದಾದರ್‌ನಲ್ಲಿರುವ ಶಿವಾಜಿ ಪಾರ್ಕ್‌ನಲ್ಲಿ ಹಲವು ಯುವ ಆಟಗಾರರಿಗೆ ಕೋಚ್ ನೀಡಿದ್ದಾರೆ. ಅವರ ಶಿಷ್ಯ ತೆಂಡುಲ್ಕರ್ ಕ್ರಿಕೆಟ್ ಚರಿತ್ರೆಯಲ್ಲಿ ಓರ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ಬೆಳೆದಿದ್ದರು.
ಪ್ರತಿ ವರ್ಷ ಶಿಕ್ಷಕರ ದಿನದಂದು ಬಾಲ್ಯದ ಕೋಚ್‌ರನ್ನು ಭೇಟಿಯಾಗುತ್ತಿದ್ದ ತೆಂಡುಲ್ಕರ್ ಅವರ ಆಶೀರ್ವಾದ ಪಡೆಯುತ್ತಿದ್ದರು. 1990ರಲ್ಲಿ ಅಚ್ರೇಕರ್‌ಗೆ ದ್ರೋಣಾಚಾರ್ಯ ಪ್ರಶಸ್ತಿ ಲಭಿಸಿತ್ತು. 2010ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ಶ್ರೀಗೆ ಭಾಜನರಾಗಿದ್ದರು. ಅದೇ ವರ್ಷ ಕ್ರೀಡಾ ನಿಯತಕಾಲಿಕದಿಂದ ಜೀವಮಾನ ಸಾಧನೆ ಪ್ರಶಸ್ತಿ ಪಡೆದಿದ್ದರು.
ಅಚ್ರೇಕರ್ ಅವರು ವಿನೋದ್ ಕಾಂಬ್ಳಿ ಹಾಗೂ ಅಜಿತ್ ಅಗರ್ಕರ್‌ಗೂ ಕೋಚ್ ನೀಡಿದ್ದಾರೆ. ಚಂದ್ರಕಾಂತ್ ಪಂಡಿತ್, ಸಂಜಯ್ ಬಂಗಾರ್, ಪ್ರವೀಣ್ ಆಮ್ರೆ ಹಾಗೂ ರಮೇಶ್ ಪೊವಾರ್ ಅವರು ಅಚ್ರೇಕರ್ ಗರಡಿಯಲ್ಲಿ ಪಳಗಿದ ಆಟಗಾರರು.