ಉಡುಪಿ: ಜ.4ರಿಂದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ
ಉಡುಪಿ, ಜ.2: ಪರ್ಯಾಯ ಶ್ರೀಪಲಿಮಾರು ಮಠ, ಭಾರತೀಯ ವಿದ್ವತ್ ಪರಿಷತ್ ಹಾಗೂ ತತ್ತ್ವ ಸಂಶೋಧನಾ ಸಂಸತ್ ಉಡುಪಿ ಸಂಸ್ಥೆಗಳು, ಹೊಸದಿಲ್ಲಿಯ ಭಾರತೀಯ ದಾರ್ಶನಿಕ ಅನುಸಂಧಾನ ಪರಿಷತ್ ಹಾಗೂ ಹೈದರಾಬಾದ್‌ನ ಇಂಡಿಕ್ ಅಕಾಡೆಮಿಗಳ ಸಹಯೋಗದೊಂದಿಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜ.4ರಿಂದ 6ರವರೆಗೆ ಅಂತಾರಾಷ್ಟ್ರೀಯ ವಿಚಾರ ಸಂಕಿರಣವೊಂದನ್ನು ಆಯೋಜಿಸಲಾಗಿದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಶ್ರೀಕೃಷ್ಣ ಮಠದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಷ್ಪಕ್ಷಪಾತ ಭಾರತೀಯ ಇತಿಹಾಸದ ಮಂಥನ’ (ಡಿಸ್ಪಾಶಿನೇಟ್ ಚರ್ನಿಂಗ್ ಆಫ್ ಇಂಡಾಲಜಿ’ ವಿಷಯದಲ್ಲಿ ಮೂರು ದಿನಗಳ ಈ ವಿಚಾರ ಸಂಕಿರಣ ನಡೆಯಲಿದೆ ಎಂದವರು ತಿಳಿಸಿದರು.
ಈ ವಿಚಾರಸಂಕಿರಣದಲ್ಲಿ ಅಮೆರಿಕಾ, ಫ್ರಾನ್ಸ್, ಬ್ರೆಜಿಲ್ ಹಾಗೂ ಅಬುಧಾಬಿ ದೇಶಗಳ ಸುಮಾರು ಎಂಟು ಮಂದಿ ವಿದೇಶಿ ವಿದ್ವಾಂಸರು ಅಲ್ಲದೇ, ದೇಶದ ಎಲ್ಲಾ ರಾಜ್ಯಗಳ 50ಕ್ಕೂ ಅಧಿಕ ಖ್ಯಾತನಾಮ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ. ಭಾರತದ ಏಳು ವಿಶ್ವವಿದ್ಯಾಲಯದ ಕುಲಪತಿಗಳು ಸಹ ಭಾಗವಹಿಸಲಿ ದ್ದಾರೆ ಎಂದರು.
ಕೆನಡಾ ದೇಶದ ಬ್ರಿಟಿಷ್ ಕೊಲಂಬಿಯಾ ವಿವಿಯ ಅಗ್ರಗಣ್ಯ ಪ್ರಾಧ್ಯಾಪಕರೂ, ವಿಶ್ವವಿಖ್ಯಾತ ವಿದ್ವಾಂಸರೂ ಆದ ಪ್ರೊ.ಅಶೋಕ್ ಅಕ್ಲೂಜಕರ್ ಈ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಹತ್ತು ಪ್ರಮುಖವಾದ ವಿಷಯಗಳನ್ನು ಆಧರಿಸಿ ಎಂಟು ಸಮಾನಾಂತರ ಗೋಷ್ಠಿಗಳು ನಡೆಯಲಿದ್ದು, ಇದರಲ್ಲಿ 175ಕ್ಕೂ ಅಧಿಕ ಮಂದಿ ವಿಷಯ ತಜ್ಞರು ಭಾಗವಹಿಸಲಿದ್ದಾರೆ ಎಂದು ಭಾರತೀಯ ವಿದ್ವತ್ ಪರಿಷತ್‌ನ ಡಾ.ವೀರನಾರಾಯಣ ಪಾಂಡುರಂಗಿ ತಿಳಿಸಿದರು.
ಜ.4ರ ಶುಕ್ರವಾರ ಬೆಳಗ್ಗೆ 8:45ಕ್ಕೆ ಹೊಸದಿಲ್ಲಿಯ ಐಸಿಪಿಆರ್‌ನ ಅಧ್ಯಕ್ಷ ಪ್ರೊ.ಎಸ್.ಆರ್.ಭಟ್ ಹಾಗೂ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಕುಲಪತಿ ಪ್ರೊ.ಮುರಳೀಧರ ಶರ್ಮ ಅವರ ಉಪಸ್ಥಿತಿಯಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ವಿಚಾರ ಸಂಕಿರಣ ವನ್ನು ಉದ್ಘಾಟಿಸಲಿದ್ದಾರೆ. ಪ್ರೊ.ಅಶೋಕ್ ಅಕ್ಲೂಜಕರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.
ಜ.6ರ ರವಿವಾರ ಸಂಜೆ 4:30ಕ್ಕೆ ಚಿನ್ಮಯ ವಿವಿಯ ಕುಲಪತಿ ಪ್ರೊ. ಗೌರಿ ಮಾಹುಲಿಕರ್ ಹಾಗೂ ನಾಗಪುರ ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಅವರು ಸಮಾರೋಪ ಭಾಷಣ ಹಾಗೂ ವಿದ್ವಾಂಸರ ಸನ್ಮಾನ ಕಾರ್ಯಕ್ರಮ ನೆರವೇರಿಸುವರು ಎಂದರು.
ಜ.5ರಂದು ಕೇರಳದ ಕಾಲಡಿ, ಶೃಂಗೇರಿ ಹಾಗೂ ಬೆಂಗಳೂರಿನಿಂದ ಆಗಮಿಸುವ ಮಹಿಳಾ ವಿದ್ವಾಂಸರ ವಾಕ್ಯಾರ್ಥ ಸಭೆ ನಡೆಯಲಿದೆ. 4ರಂದು ಡಾ. ರಾಮಕೃಷ್ಣ ಪೆಜತ್ತಾಯ ಅವರು ಅವಧಾನ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ. 6ರಂದು ‘ಸಂಸ್ಕೃತ ಯಾರದ್ದು’ ಎಂಬ ವಿಷಯದಲ್ಲಿ ಸಾರ್ವಜನಿಕ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಡಾ.ಪಾಂಡುರಂಗಿ ತಿಳಿಸಿದರು.
ಡಾ. ವಂಶಿಕೃಷ್ಣ ಆಚಾರ್ಯ, ಶ್ರೀಶ ಆಚಾರ್ಯ ಕಡೆಕಾರು ಉಪಸ್ಥಿತರಿದ್ದರು.