ಹೆಜಮಾಡಿ ಟೋಲ್‍ನಲ್ಲಿ ಪ್ರತಿಭಟನೆ: ಸ್ಥಳೀಯ ವಾಹನಗಳಿಗೆ ವಿನಾಯಿತಿ, ವಿವಿಧ ಬೇಡಿಕೆ ಈಡೇರಿಸಲು ಆಗ್ರಹ

Update: 2019-01-02 15:01 GMT

ಪಡುಬಿದ್ರಿ, ಜ. 2: ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಹೆಜಮಾಡಿ ಟೋಲ್ ಪ್ಲಾಝಾ ಬಳಿ ಬುಧವಾರ ಪ್ರತಿಭಟನೆ ನಡೆಯಿತು.

ಹೆಜಮಾಡಿ ಟೋಲ್‍ಗೇಟ್ ಹಾಗೂ  ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಉಪಾಧ್ಯಕ್ಷ ಗುಲಾಂ ಮುಹಮ್ಮದ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ  ಹೆಜಮಾಡಿ ಟೋಲ್‍ಗೇಟ್ ಹಾಗೂ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಮತ್ತು ಮುಲ್ಕಿ ನಾಗರಿಕ ಸಮಿತಿ ನೂರಾರು ಮಂದಿ ಪಾಲ್ಗೊಂಡರು. 

ಹೆಜಮಾಡಿ ಟೋಲ್‍ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ತೊಂದರೆಯಾಗುತ್ತಿದ್ದು, ಎಲ್ಲಾ ಟೋಲ್‍ಗೇಟ್‍ಗಳನ್ನು ತೆರೆದು ಸಂಚಾರಕ್ಕೆ ಮುಕ್ತಗೊಳಿಸಬೇಕು. ಟೋಲ್ ಫ್ಲಾಝಾದಲ್ಲಿ ಮೂಲ ಸೌಕರ್ಯಕ್ಕೆ ಒತ್ತು ನೀಡಬೇಕು. ಈಗಾಗಲೇ ವಿಳಂಬವಾಗಿರುವ ಉಭಯ ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವಿಸ್ ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. 

ಹೆಜಮಾಡಿ ಟೋಲ್ ವ್ಯಾಪ್ತಿಯ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಉಚ್ಚಿಲ, ಪಲಿಮಾರು, ಮೂಲ್ಕಿ ಹಾಗೂ ಹಳೆಯಂಗಡಿ ಪ್ರದೇಶದ ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕು. ಈ ಹಿಂದಿನ ಸಭೆಗಳಲ್ಲಿ ನವಯುಗ ಕಂಪೆನಿ ನೀಡಿದ ಹೆಜಮಾಡಿ ಕನ್ನಂಗಾರು ಬೈಪಾಸ್ ಬಳಿ ಸರ್ವಿಸ್ ರಸ್ತೆ, ಶಿವನಗರ ಬಳಿ ಸ್ಕೈವಾಕ್ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಬೇಕು ಒಂದು ಒತ್ತಾಯಿಸಿ ಪ್ರತಿಭಟನಕಾರರು ಕಾಪು ಕಂದಾಯ ನಿರೀಕ್ಷಕ ರವಿಶಂಕರ್ ಮೂಲಕ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಮುಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವ, ಶೇಖರ್ ಹೆಜಮಾಡಿ, ಮಧು ಆಚಾರ್ಯ, ಸುಧಾಕರ ಕರ್ಕೇರ, ಸಿದ್ದೀಕ್ ತಲಪಾಡಿ, ಅನ್ಸಾರ್ ಅಹ್ಮದ್, ಧನಂಜಯ್ ಮಟ್ಟು, ಮುನೀರ್ ಕಾರ್ನಾಡ್, ಸುಧೀರ್ ಕರ್ಕೇರ, ಉದಯ ಶೆಟ್ಟಿ, ರಾಧಿಕಾ, ದೇವಪ್ರಸಾದ್ ಪುನರೂರು, ಶ್ರೀಪತಿ ಭಟ್, ಸಾಧು ಅಂಚನ್, ಹರೀಶ್ ಶೆಟ್ಟಿ ಪಾದೆಬೆಟ್ಟು, ಪ್ರತಾಪ್ ಶೆಟ್ಟಿ ಸಾಸ್ತಾನ, ಜೀವನ್ ಶೆಟ್ಟಿ, ದೇವಣ್ಣ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗಣೇಶ್ ಕೋಟ್ಯಾನ್, ವೈ. ಸುಧೀರ್ ಕುಮಾರ್, ಅಬ್ದುಲ್ ಅಜೀಜ್, ವಿಶ್ವಾಸ್ ಅಮೀನ್, ಎಂ.ಎಸ್. ನಿಝಾಮುದ್ದೀನ್ ಉಪಸ್ಥಿತರಿದ್ದರು.

ಮುಖ್ಯಾಂಶಗಳು

ಮುಲ್ಕಿಯಿಂದ ಹಲವಾರು ವಾಹನಗಳಲ್ಲಿ ಬಂದಿದ್ದ ನೂರಾರು ಪ್ರತಿಭಟನಕಾರರು ಸುಂಕ ಪಾವತಿಸದೇ ಟೋಲ್‍ಗೇಟ್ ದಾಟಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಪ್ರತಿಭಟನೆಗೆ ಮಣಿದು ಸಾಸ್ತಾನ ಟೋಲ್ ಐದು ಕಿ.ಮೀ. ವ್ಯಾಪ್ತಿಯ ವಾಹನಗಳಿಗೆ ನವಯುಗ ಕಂಪೆನಿ ಟೋಲ್ ವಿನಾಯಿತಿ ನೀಡಿದೆ. ಎಎಸ್ಪಿ ಕೃಷ್ಣಕಾಂತ್, ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಟೋಲ್ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಮೊದಲು ಪ್ರತಿಭಟನೆ ನಡೆಸಿದವರು ಈ ಪ್ರತಿಭಟನೆಯಲ್ಲಿ ನಾಪತ್ತೆಯಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News