×
Ad

‘ಧಾರ್ಮಿಕ ಪ್ರೊಟೋಕಾಲ್ ಉಲ್ಲಂಘನೆ ಸರಿಯಲ್ಲ’ ಶಬರಿಮಲೆ ವಿವಾದ ಕುರಿತು ಪಲಿಮಾರುಶ್ರೀ

Update: 2019-01-02 21:30 IST

ಉಡುಪಿ, ಜ.2: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶದ ವಿಚಾರದಲ್ಲಿ ಧಾರ್ಮಿಕ ಪ್ರೊಟೋಕಾಲ್‌ನ್ನು ಉಲ್ಲಂಘಿಸುವುದು ಸರಿಯಲ್ಲ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬುಧವಾರ ಶ್ರೀಕೃಷ್ಣ ಮಠದ ಕನಕಮಂಟಪದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರೊಟೋಕಾಲ್ ಎನ್ನುವುದು ಎಲ್ಲಾ ಕಡೆಗಳಲ್ಲಿ ಇದೆ. ರಾಷ್ಟ್ರಪತಿ, ಪ್ರಧಾನಿಗೂ ಪ್ರೊಟೋಕಾಲ್ ಎಂಬುದಿದೆ. ಶಬರಿಮಲೆಗೂ ಒಂದು ಪ್ರೊಟೋಕಾಲ್ ಜಾರಿಯಲ್ಲಿದೆ. ಈ ಧಾರ್ಮಿಕ ಪ್ರೊಟೋಕಾಲ್ ಬಗ್ಗೆ ನಾವು ಯಾಕೆ ಆಕ್ಷೇಪ ಎತ್ತಬೇಕು, ಏಕೆ ಅದನ್ನು ಉಲ್ಲಂಘಿಸಬೇಕು ಎಂದು ಪ್ರಶ್ನಿಸಿದರು.

ಶಬರಿಮಲೆಯಲ್ಲಿ ಇಷ್ಟು ವರ್ಷ ಎಲ್ಲವನ್ನೂ ಒಪ್ಪಲಾಗಿದೆ. ಈಗ ಹೊರಗಿ ನವರು ಬಂದು ಸಂಪ್ರದಾಯವನ್ನು ಆಕ್ಷೇಪಿಸೋದ್ಯಾಕೆ ? ಎಂದ ಅವರು, ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿಲ್ಲ. ನಿರ್ದಿಷ್ಟ ವಯೋಮಾನದ ಮಹಿಳೆಯರು ಮಾತ್ರ ದೇವಸ್ಥಾನ ಪ್ರವೇಶಿಸದಂತೆ ನಿಯಮವಿದೆ. ಭಕ್ತಿಯಿಂದ ದೇವಸ್ಥಾನ ಪ್ರವೇಶ ತಪ್ಪಲ್ಲ. ಆದರೆ ಸಂಪ್ರದಾಯ ಧಿಕ್ಕರಿಸಿ ಬಲಾತ್ಕಾರದ ಪ್ರವೇಶ ಸರಿಯಲ್ಲ ಎಂದರು.

ಈ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಆಕ್ಷೇಪಿಸಲ್ಲ. ಆದರೆ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಪರಾಮರ್ಶೆ ಮಾಡಬೇಕಾದ ಅಗತ್ಯವಿದೆ. ಭಕ್ತರಿಗೆ ಸಮಸ್ಯೆ ಆಗದಂತೆ ಕೋರ್ಟ್ ತೀರ್ಮಾನಿಸಲಿ ಎಂದವರು ಹೇಳಿದ್ದಾರೆ.

ಶ್ರೀ ವಿಶ್ವಸಂತೋಷ ಭಾರತಿ: ನಿಜವಾಗಿ ಆ ಮಹಿಳೆಯರು ಭಕ್ತಿಯಿಂದ ಹೋಗಿದ್ದಲ್ಲ. ಬೇರೆಯವರ ಪ್ರಚೋದನೆಯಿಂದ ಹೋಗಿದ್ದಾರೆ. ರಾತ್ರಿ 3:45ಕ್ಕೆ ಹಿಂಬಾಗಿಲಿನ ಮೂಲಕ ಮಹಿಳೆಯರು ದೇವಾಲಯ ಪ್ರವೇಶಿಸಿದ್ದಾರೆ. ದೇವಸ್ಥಾನ ಪ್ರವೇಶಕ್ಕೂ ಮೊದಲು ಆಡಳಿತ ಕಚೇರಿಯಲ್ಲಿ ಮಹಿಳೆಯರನ್ನು ಕೂರಿಸಿ, ಅವರ ರಕ್ಷಣೆಗಾಗಿ 30 ಜನ ಸಿವಿಲ್ ಡ್ರೆಸ್‌ನ ಪೊಲೀಸ್‌ರನ್ನು ನಿಯೋಜಿಸಲಾಗಿತ್ತು ಎಂದು ಬಾರಕೂರು ಸಂಸ್ಥಾನದ ಶ್ರೀವಿಶ್ವಸಂತೋಷ ಭಾರತಿ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

ಸರಕಾರ ನಂಬಿಕೆ, ಭಕ್ತಿ ಇಲ್ಲದ ನಾಸ್ತಿಕ ಮಹಿಳೆಯರನ್ನು ಕರೆತಂದು ಪ್ರಾಯೋಜಿತ ಕಾರ್ಯ ಮಾಡಿದೆ. ಆ ಕ್ಷೇತ್ರಕ್ಕೆ ಮಾಡಿದ ಅಪಚಾರ, ಹಿಂದೂ ಧರ್ಮದ ಮೇಲೆ ಮಾಡಿದ ಅತ್ಯಾಚಾರ.18 ಮೆಟ್ಟಿಲ ಮೂಲಕ ಮಹಿಳೆಯರು ಹತ್ತಿಲ್ಲ. ಹಿಂದಿನಿಂದ ಪ್ರವೇಶ ಮಾಡಿದ್ದಾರೆ ಅನ್ನೋದು ಸಮಧಾನ. ದೇವಸ್ಥಾನ ಆಚರಣೆ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಮೂರು ದಿನ ದೇವಸ್ಥಾನ ಮುಚ್ಚಿರುವುದು ಸ್ವಾಗತಾರ್ಹ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News