ರಫೇಲ್ ಡೀಲ್: ಜೆಪಿಸಿ ತನಿಖೆಗೆ ನಿರಾಕರಿಸಿದ ಕೇಂದ್ರ ಸರಕಾರ

Update: 2019-01-02 16:10 GMT

ಹೊಸದಿಲ್ಲಿ,ಜ.2: ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದದಲ್ಲಿ ನಡೆದಿದೆಯೆನ್ನಲಾದ ಹಗರಣದ ಕುರಿತು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯಿಂದ ತನಿಖೆಗಾಗಿ ಪ್ರತಿಪಕ್ಷಗಳ ಬೇಡಿಕೆಯನ್ನು ಸರಕಾರವು ಬುಧವಾರ ಲೋಕಸಭೆಯಲ್ಲಿ ತಿರಸ್ಕರಿಸಿತು.

ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ತಿರುಗೇಟು ನೀಡಿದ ವಿತ್ತಸಚಿವ ಅರುಣ್ ಜೇಟ್ಲಿ ಅವರು, ಈ ವಿಷಯದಲ್ಲಿ ಈಗಾಗಲೇ ಸರ್ವೋಚ್ಚ ನ್ಯಾಯಾಲಯವು ತೃಪ್ತಿಯನ್ನು ವ್ಯಕ್ತಪಡಿಸಿರುವುದರಿಂದ ಜೆಪಿಸಿ ತನಿಖೆಯ ಅಗತ್ಯವಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಸದಸ್ಯರ ನಿರಂತರ ಪ್ರತಿಭಟನೆ ಜೇಟ್ಲಿಯವರ ಭಾಷಣಕ್ಕೆ ವ್ಯತ್ಯಯವನ್ನುಂಟು ಮಾಡಿದ್ದು,ಕೆಲವರು ಕಾಗದದ ವಿಮಾನಗಳನ್ನು ಎಸೆಯುತ್ತಿದ್ದರು. ಇದರಿಂದ ಕುಪಿತಗೊಂಡ ಸ್ಪೀಕರ್ ಸುಮಿತ್ರಾ ಮಹಾಜನ್ ಅವರನ್ನು ಗದರಿಸಿದರೆ,

ಬಹುಶಃ ಕಾಂಗ್ರೆಸ್ ಸದಸ್ಯರು ಯುರೋ ಫೈಟರ್ ನೆನಪಿನಲ್ಲಿ ಈ ಕಾಗದದ ವಿಮಾನಗಳನ್ನು ಎಸೆಯುತ್ತಿದ್ದಾರೆ ಎಂದು ಜೇಟ್ಲಿ ಕುಟುಕಿದರು. ರಫೇಲ್‌ನೊಂದಿಗೆ ಈ ವಿಮಾನಗಳೂ ಪೈಪೋಟಿಯಲ್ಲಿದ್ದವು.

ತನ್ನ ಕೈಗಳು ಈಗಾಗಲೇ ಭ್ರಷ್ಟಾಚಾರದಿಂದ ಕಳಂಕಿತಗೊಂಡಿವೆ ಎಂದು ಕಾಂಗ್ರೆಸ್ ಪಕ್ಷವು ಭಾವಿಸಿರುವುದರಿಂದ ಸ್ವಚ್ಛ ದಾಖಲೆಯನ್ನು ಹೊಂದಿರುವ ಮೋದಿ ಸರಕಾರದ ಹೆಸರನ್ನು ಕೆಡಿಸಲು ಸುಳ್ಳನ್ನು ‘ತಯಾರಿಸಲು’ ಅದು ನಿರ್ಧರಿಸಿದೆ ಎಂದು ಜೇಟ್ಲಿ ನುಡಿದರು. ಈಗಾಗಲೇ ಬೊಫೋರ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಕೊಂಡಿರುವ ಪಕ್ಷದಿಂದ ಜೆಪಿಸಿ ತನಿಖೆಯ ಬೇಡಿಕೆಯನ್ನು ಒಪ್ಪಿಕೊಳ್ಳುವಲ್ಲಿ ಯಾವುದೇ ಅರ್ಥವಿಲ್ಲ ಎಂದರು.

  ಹಿಂದೆ ಮಹಾನ್ ನಾಯಕರು ಮುನ್ನಡೆಸಿದ್ದ ಹಳೆಯ ಪಕ್ಷಕ್ಕೆ ಯುದ್ಧವಿಮಾನದ ಪ್ರಾಥಮಿಕ ಅರ್ಥವೂ ಗೊತ್ತಿರದ ವ್ಯಕ್ತಿ ಈಗ ನಾಯಕನಾಗಿರುವುದು ದುರಂತ ಎಂದು ಜೇಟ್ಲಿ ತಿವಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News