ಕಲಾ ವಿಮರ್ಶಕ ಎ.ಈಶ್ವರಯ್ಯಗೆ ನುಡಿ ನಮನ
ಉಡುಪಿ, ಜ.2: ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ, ಕಲಾ ವಿಮರ್ಶಕ ಎ.ಈಶ್ವರಯ್ಯ ಅವರಿಗೆ ಉಡುಪಿಯ ವಿವಿಧ ಸಾಂಸ್ಕೃತಿಕ ಸಂಘಟನೆ ಗಳ ವತಿಯಿಂದ ನುಡಿ ನಮನ ಕಾರ್ಯಕ್ರಮವನ್ನು ಬುಧವಾರ ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ನೂತನ ಕಟ್ಟಡದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಮಾತನಾಡಿ, ಈಶ್ವರಯ್ಯ ಸಂಗೀತ, ಸಾಹಿತ್ಯ, ಕಲೆಯ ಭಾವ ತ್ರಿವೇಣಿ ಸಂಗಮ ಆಗಿದ್ದರು. ಕಲಾವಿದರು ಹಾಗೂ ಕಲಾ ಪ್ರತಿಭೆಯನ್ನು ಬೆಳೆಸಿದ ಅವರು, ಯಕ್ಷಗಾನ ಹಾಗೂ ಚಿತ್ರ ಕಲಾವಿದರುಗಳಿಗೆ ಪ್ರೋತ್ಸಾಹ ನೀಡಿರುವುದು ಮರೆಯಲು ಸಾಧ್ಯವಿಲ್ಲ ಎಂದು ಹೆೀಳಿದರು.
ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಸೂಕ್ಷ್ಮ ಜ್ಞಾನ ಹೊಂದಿದ್ದ ಈಶ್ವರಯ್ಯ ಸಾಂಸ್ಕೃತಿಕ ಪತ್ರಿಕೋದ್ಯಮಿಯಾಗಿ ನಮ್ಮ ಮಧ್ಯೆ ಗುರುತಿಸಿ ಕೊಂಡಿದ್ದರು. ಮಾಹೆ ವತಿಯಿಂದ ಸಾಂಸ್ಕೃತಿಕ ಪತ್ರಿಕೋದ್ಯಮ ಅಧ್ಯಯನ ನಡೆಸುವ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.
ಹಿರಿಯ ರಂಗಕರ್ಮಿ ಪ್ರೊ.ಮಾಧವ ಆಚಾರ್ಯ, ರಾಘವೇಂದ್ರ ಆಚಾರ್ಯ, ಹಾಸ್ಯ ಸಾಹಿತಿ ಕು.ಗೋಪಾಲ ಭಟ್, ಬಳಕೆದಾರರ ವೇದಿಕೆಯ ಸಂಚಾಲಕ ದಾಮೋದರ್ ಐತಾಳ್, ಪ್ರೊ.ಅರವಿಂದ ಹೆಬ್ಬಾರ್, ಉಮಾ ಶಂಕರಿ, ಅಸ್ಟ್ರೋ ಮೋಹನ್, ಉದ್ಯಾವರ ನಾಗೇಶ್ ಕುಮಾರ್, ಸುಶೀಲಾ ರಾವ್, ಶ್ರೀನಿವಾಸ ಉಪಾಧ್ಯಾಯ, ಕಾತ್ಯಾಯಿನಿ ಕುಂಜಿಬೆಟ್ಟು, ರಮೇಶ್ ರಾವ್ ನುಡಿನಮನ ಸಲ್ಲಿಸಿದರು.
ಪ್ರೊ.ಎಂ.ಎಲ್.ಸಾಮಗ ನಿರ್ಣಯ ಮಂಡಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಮರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.