ನ್ಯಾಯಾಲಯದ ತೀರ್ಪಿಗೆ ಕಾಯಲಾಗದು: ವಿಎಚ್‌ಪಿ

Update: 2019-01-02 16:47 GMT

ಹೊಸದಿಲ್ಲಿ, ಜ.2: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವಿಷಯದ ಕುರಿತು ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸಿರುವ ವಿಶ್ವ ಹಿಂದೂ ಪರಿಷದ್ (ವಿಎಚ್‌ಪಿ) ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ಹಿಂದೂಗಳು ನ್ಯಾಯಾಲಯದ ತೀರ್ಪಿನವರೆಗೆ ಕಾಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

 ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ ನೀಡಿದ್ದ ಹೇಳಿಕೆಗೆ ಅಲೋಕ್ ಕುಮಾರ್ ಪ್ರತಿಕ್ರಿಯಿಸುತ್ತಿದ್ದರು. ನ್ಯಾಯಾಂಗ ಪ್ರಕ್ರಿಯೆ ಮುಗಿದ ಬಳಿಕ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಮೋದಿ ಹೇಳಿದ್ದರು. ಇದೀಗ ಇರುವ ಏಕೈಕ ಮಾರ್ಗವೆಂದರೆ ರಾಮ ಜನ್ಮಭೂಮಿಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಲು ಶಾಸನವನ್ನು ಜಾರಿಮಾಡುವುದಾಗಿದೆ ಎಂದು ಅಲೋಕ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

ಅಯೋಧ್ಯೆ ವಿಷಯವನ್ನು ಸೂಕ್ತ ನ್ಯಾಯಪೀಠದೆದುರು ಲಿಸ್ಟ್ ಮಾಡಲಾಗಿಲ್ಲ. ಇದು ಸಿಐಜೆಯವರ ನ್ಯಾಯಾಲಯದಲ್ಲಿದೆ ಮತ್ತು ವಿಚಾರಣೆ ವಿಳಂಬವಾಗಲಿದೆ. ಆದ್ದರಿಂದ ರಾಮಮಂದಿರ ನಿರ್ಮಾಣದ ಕುರಿತು ಚರ್ಚಿಸಲು ವಿಎಚ್‌ಪಿ ಆಶ್ರಯದಲ್ಲಿ ಜನವರಿ 31 ಮತ್ತು ಫೆಬ್ರವರಿ 1ರಂದು ಧರ್ಮ ಸಂಸದ್ ನಡೆಯಲಿದೆ. ಪ್ರಧಾನಿ ಮೋದಿಯ ಅಧಿಕಾರಾವಧಿಯಲ್ಲೇ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ವಿಎಚ್‌ಪಿಯ ಆಶಯವಾಗಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News