ಬಂಟ್ವಾಳದ ಎಎಸ್ಪಿಯಾಗಿ ಸೈದುಲು ಅಡಾವತ್
ಬಂಟ್ವಾಳ, ಜ. 2: ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಸೈದುಲು ಅಡಾವತ್ ಅಧಿಕಾರ ಸ್ವೀಕರಿಸಿದ್ದಾರೆ.
ಈವರೆಗೆ ಎಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಋಷಿಕೇಶ್ ಭಗವಾನ್ ಸೋನಾವಣೆ ಬೆಂಗಳೂರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧೀಕ್ಷಕರಾಗಿ ಮುಂಭಡ್ತಿ ಹೊಂದಿ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದು, ಬಂಟ್ವಾಳಕ್ಕೆ ನೂತನ ಎಎಸ್ಪಿ ಆಗಮಿಸಿದ್ದಾರೆ.
ಮೂಲತಃ ತೆಲಂಗಾಣದವರಾದ ಇವರು 2016ರ ಬ್ಯಾಚ್, ಕರ್ನಾಟಕ ಕೇಡರ್‍ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾಯೋಗಿಕ ತರಬೇತಿ ಪಡೆದಿರುವ ಅವರು, ಪ್ರಸ್ತುತ ದ.ಕ.ಜಿಲ್ಲೆಯ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ನಿಯುಕ್ತಿಗೊಂಡಿದ್ದಾರೆ.
ಈ ಸಂದರ್ಭ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಜಿ., ಎಸ್ಸೈಗಳಾದ ಚಂದ್ರಶೇಖರ, ಹರೀಶ್, ಪ್ರಸನ್ನ, ಮಂಜುಳಾ, ಯಲ್ಲಪ್ಪ, ಸೌಮ್ಯ, ರವಿ. ಉಪಸ್ಥಿತರಿದ್ದರು. ಬಳಿಕ ಉಪವಿಭಾಗ ವ್ಯಾಪ್ತಿಯ ಎಲ್ಲ ಅಧಿಕಾರಿಗಳ ಸಭೆಯನ್ನು ನಡೆಸಿದರು.