ಧರ್ಮಸ್ಥಳ ರತ್ನಗಿರಿಯ ಭಗವಾನ್ ಶ್ರೀಬಾಹುಬಲಿ ಮಹಾಮಸ್ತಕಾಭಿಷೇಕ-ಜನಮಂಗಳ ಕಾರ್ಯಕ್ರಮ

Update: 2019-01-02 17:06 GMT

ಧರ್ಮಸ್ಥಳ, ಜ. 2: ಧರ್ಮಸ್ಥಳದಲ್ಲಿ 2019ರ ಫೆ. 9 ರಿಂದ 18ರ ವರೆಗೆ 39 ಅಡಿ ಎತ್ತರದ ಭಗವಾನ್ ಬಾಹುಬಲಿ ಮೂರ್ತಿಗೆ  ನಾಲ್ಕನೇ ಮಹಾಮಸ್ತಕಾಭಿ ಷೇಕ ನಡೆಯಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಬಾಹುಬಲಿ ಮೂರ್ತಿ ಪ್ರತಿಷ್ಠಾಪಕ ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಅವರು ಬುಧವಾರ ಧರ್ಮಸ್ಥಳದಲ್ಲಿ “ಶ್ರೀ ಸನ್ನಿಧಿ” ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪರಮ ಪೂಜ್ಯ108 ಆಚಾರ್ಯ ಶ್ರೀ ವರ್ಧ ಮಾನ ಸಾಗರ ಮುನಿಮಹಾರಾಜರ ನೇತೃತ್ವದಲ್ಲಿ ಹಾಗೂ ಪೂಜ್ಯ 108 ಆಚಾರ್ಯ ಶ್ರೀಪುಷ್ಪದಂತ ಸಾಗರ ಮುನಿಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕರ ಮಾರ್ಗದರ್ಶನದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದರು.

1982, 1995 ಮತ್ತು 2007 ರಲ್ಲಿ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ ನಡೆದಿದ್ದು ಇದೀಗ ನಾಲ್ಕನೆ ಮಹಾಮಸ್ತಕಾಭಿಷೇಕ ಫೆ. 9 ರಿಂದ 18 ರ ವರೆಗೆ ನಡೆಯಲಿದೆ. ಇನ್ನೂರು ಮಂದಿ ದಿಗಂಬರ ಮುನಿಗಳು ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ ಎಂದರು. ಮಸ್ತಕಾಭಿಷೇಕ ಸಂದರ್ಭ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಮಾರಂಭಕ್ಕೆ  ಬರಲು ಒಪ್ಪಿದ್ದಾರೆ. ರಾಜ್ಯಪಾಲರು, ಮುಖ್ಯಮಂತ್ರಿ, ಹಾಗೂ ಇತರ ಸಚಿವರನ್ನು ಆಹ್ವಾನಿಸಲಾಗಿದೆ. ಸರಕಾರ ಕಾರ್ಯಕ್ರಮಕ್ಕೆ ವಿಶೇಷ ಸಹಯೋಗ-ಸಹಕಾರ ನೀಡುತ್ತಿದೆ. ಸರ್ಕಾರ ಮಹಾಮಸ್ತಕಾಭಿಷೇಕಕ್ಕೆ ವಿಶೇಷ ನೆರವು ನೀಡಿದೆ. ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದು ಹೆಗ್ಗಡೆಯವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News