ಮಂಗಳೂರು: ದೇಶದ ರೈತರ ಸಾಲಮನ್ನಾಕ್ಕೆ ಆಗ್ರಹಿಸಿ ಧರಣಿ

Update: 2019-01-03 07:12 GMT

ಮಂಗಳೂರು, ಜ.3: ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿ ಅನುಷ್ಠಾನ ಹಾಗೂ ದೇಶದ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಆಗ್ರಹಿಸಿ ದ.ಕ. ಜಿಲ್ಲೆಯ ರೈತ ಸಂಘಟನೆಗಳಿಂದ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಯಿತು. 

ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸೀರು ಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ,  ದ.ಕ. ಜಿಲ್ಲಾ ರೈತ ಸಂಘಟನೆಗಳ ಆಶ್ರಯದಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯ ಕರೆಯಂತೆ ಜ.8 ಮತ್ತು 9ರಂದು ಅಖಿಲ ಭಾರತ ಮುಷ್ಕರವನ್ನು ಬೆಂಬಲಿಸಿ ಈ ಧರಣಿ ನಡೆಸಲಾಗುತ್ತಿದೆ.

ಅಖಿಲ ಭಾರತ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಕಳೆದ ನವೆಂಬರ್‌ನಲ್ಲಿ ಹೊಸದಿಲ್ಲಿಯಲ್ಲಿ ಧರಣಿಗಳನ್ನು ನಡೆಸಲಾಗಿತ್ತು. ಆ ಚಳವಳಿಯ ಬಳಿಕ ರೈತರು, ದುಡಿಯುವ ವರ್ಗ ಹಾಗೂ ಮಧ್ಯಮ ವರ್ಗದ ಜನತೆಯನ್ನು  ಕೇಂದ್ರ ಸರಕಾರ ನಿರ್ಲಕ್ಷಿಸಿದೆ ಎಂದು ಆಪಾದಿಸಿದರು.

ಡಾ.ಎಂ.ಎಸ್.ಸ್ವಾಮಿನಾಥನ್ ಕೃಷಿ ಆಯೋಗದ ವರದಿಯ ಪ್ರಕಾರ ಕೃಷಿ ಉತ್ಪನ್ನಗಳ ವೆಚ್ಚಕ್ಕೆ ಶೇ.50ರಷ್ಟನ್ನು ಸೇರಿಸಿ ಸ್ಥಿರ ಬೆಲೆಯನ್ನು ಶಾಶ್ವತವಾಗಿ ನೀಡಬೇಕು. ಕೃಷಿ ಬಿಕ್ಕಟ್ಟಿನ ಕುರಿತು ವಿಶೇಷ ಸಂಸತ್ ಅಧಿವೇಶನ ಕರೆಯಬೇಕು. ದೇಶದ ಎಲ್ಲ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ ಮಾತ್ರವಲ್ಲದೆ, ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಬೇಕು ಎಂದು ರವಿಕಿರಣ ಪುಣಚ ಆಗ್ರಹಿಸಿದರು.

ಧರಣಿಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮನೋಹರ ಶೆಟ್ಟಿ, ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ಶೇಖ್ ಅಬ್ದುಲ್ಲಾ, ಜೆಡಿಎಸ್ ಕಿಸಾನ್ ಘಟಕದ ಕಾರ್ಯದರ್ಶಿ ರಾಮ ಗಣೇಶ್, ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ, ಕೆ.ಕೃಷ್ಣಪ್ಪ ಸಾಲ್ಯಾನ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News