ಉಡುಪಿ: ಭವಿಷ್ಯನಿಧಿ ಆನ್‌ಲೈನ್ ಅರ್ಜಿ ಸಲ್ಲಿಕೆ ವಿರೋಧಿಸಿ ಧರಣಿ

Update: 2019-01-03 07:25 GMT

ಉಡುಪಿ, ಜ.3: ಭವಿಷ್ಯನಿಧಿ ಅರ್ಜಿಗಳ ಶೀಘ್ರ ವಿಲೇವಾರಿಗೆ ಒತ್ತಾಯಿಸಿ ಹಾಗೂ ಕಡ್ಡಾಯ ಆನ್‌ಲೈನ್ ಅರ್ಜಿ ಸಲ್ಲಿಕೆಯನ್ನು ವಿರೋಧಿಸಿ ಮಂಗಳೂರು ಎಸ್‌ಕೆ ಬೀಡಿ ವರ್ಕರ್ಸ್‌ ಫೆಡರೇಶನ್ ಆಶ್ರಯದಲ್ಲಿ ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್(ಎಐಟಿಯುಸಿ) ನೇತೃತ್ವದಲ್ಲಿ ಗುರುವಾರ ಉಡುಪಿ ಭವಿಷ್ಯನಿಧಿ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿತ್ತು.

ಶಾಲಾ ವರ್ಗಾವಣಾ ಪ್ರಮಾಣ ಪತ್ರವನ್ನು ಮಾನ್ಯ ಮಾಡಿ ಜನನ ದಿನಾಂಕವನ್ನು ಸರಿಪಡಿಸಬೇಕು. ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಭವಿಷ್ಯ ನಿಧಿ ಅರ್ಜಿಗಳನ್ನು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕೆಂಬ ಕೇಂದ್ರ ಕಾರ್ಮಿಕ ಮಂತ್ರಾಲಯದ ಆದೇಶವನ್ನು ಕೈಬಿಡಬೇಕೆಂದು ಧರಣಿನಿರತರು ಒತ್ತಾಯಿಸಿದರು.

ಧರಣಿಯಲ್ಲಿ ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ವಿ.ಭಟ್ ಉಡುಪಿ, ಎಸ್‌ಕೆ ಬೀಡಿ ವರ್ಕರ್ಸ್‌ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಸೀತಾರಾಂ ಬೇರಿಂಜ, ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರ್ಯದರ್ಶಿ ಬಿ.ಶೇಖರ್ ಬಂಟ್ವಾಳ್, ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್ ಅಧ್ಯಕ್ಷೆ ಶಾಂತಾ ನಾಯಕ್, ಕಾರ್ಯದರ್ಶಿ ಶಶಿಕಲಾ ಗಿರೀಶ್, ಫೆಡರೇಶನ್‌ನ ಸಹ ಕಾರ್ಯದರ್ಶಿಗಳಾದ ಸುರೇಶ್ ಕುಮಾರ್ ಬಂಟ್ವಾಳ, ಎಂ.ಕರುಣಾಕರ್ ಉಪಸ್ಥಿತರಿದ್ದರು.

ಬಳಿಕ ಈ ಕುರಿತ ಮನವಿಯನ್ನು ಉಡುಪಿಯ ಸಹಾಯಕ ಭವಿಷ್ಯ ನಿಧಿ ಆಯುಕ್ತರ ಮೂಲಕ ಕೇಂದ್ರ ಕಾರ್ಮಿಕ ಸಚಿವ ಹಾಗೂ ಕೇಂದ್ರ ಪಿಎಫ್ ಆಯುಕ್ತರಿ ಸಲ್ಲಿಸಲಾಯಿತು.

ಇದಕ್ಕೂ ಮುನ್ನ ಉಡುಪಿ ಮಾರುತಿ ವಿಥಿಕಾದಲ್ಲಿರುವ ಯೂನಿಯನ್ ಕಚೇರಿಯಿಂದ ಭವಿಷ್ಯನಿಧಿ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News