ವಿಜಯ ಬ್ಯಾಂಕ್ ವಿಲೀನ ವಿರುದ್ಧ ಕರಾವಳಿಯಲ್ಲಿ ಅಸಮಾಧಾನ

Update: 2019-01-03 16:12 GMT

ಮಂಗಳೂರು, ಜ.3: ಕರಾವಳಿಗರ ನೆಚ್ಚಿನ ಬ್ಯಾಂಕ್ ಆದ ವಿಜಯ ಬ್ಯಾಂಕನ್ನು ದೇನಾ ಬ್ಯಾಂಕ್ ನೊಂದಿಗೆ ವಿಲೀನಗೊಳಿಸುವ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಕರಾವಳಿಯಾದ್ಯಂತ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

ಮುಲ್ಕಿ ಸುಂದರರಾಮ ಶೆಟ್ಟಿಯವರು ಕಟ್ಟಿ ಬೆಳೆಸಿದ ಬ್ಯಾಂಕನ್ನು ದೇನಾ ಬ್ಯಾಂಕಿನ ಹಿತಾಸಕ್ತಿಗಾಗಿ ಬಲಿ ಕೊಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿದ್ದು, ದೇನಾ ಬ್ಯಾಂಕ್ ನಷ್ಟದಲ್ಲಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರಕಾರ ಹೇಳುತ್ತಿದೆ. ಆದರೆ ನಷ್ಟದಲ್ಲಿರುವ ಬ್ಯಾಂಕ್ ಜೊತೆಗೆ ವಿಜಯ ಬ್ಯಾಂಕನ್ನು ವಿಲೀನಗೊಳಿಸುತ್ತಿರುವುದು ಎಷ್ಟು ಸರಿ, ಆಮೂಲಕ ವಿಜಯ ಬ್ಯಾಂಕ್ ಎಂಬ ಗುರುತನ್ನು ಅಳಿಸುತ್ತಿರುವುದು ಎಷ್ಟು ಸರಿ ಎಂದು ಕರಾವಳಿಗರು ಪ್ರಶ್ನಿಸುತ್ತಿದ್ದಾರೆ.

ಈ ಬಗ್ಗೆ ಇಂದು ಸುದ್ದಿಗೋಷ್ಟಿ ನಡೆಸಿದ್ದ ಸಚಿವ ಯು.ಟಿ. ಖಾದರ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. “ನಷ್ಟದಲ್ಲಿರುವ ದೇನಾ ಬ್ಯಾಂಕನ್ನು ವಿಜಯ ಬ್ಯಾಂಕ್ ನೊಂದಿಗೆ ವಿಲೀನಗೊಳಿಸಬಹುದಿತ್ತು. ಆದರೆ ಪ್ರಧಾನಿ ತನ್ನ ತವರು ರಾಜ್ಯದ ಬ್ಯಾಂಕನ್ನು ಉಳಿಸುವ ಸಲುವಾಗಿ ವಿಜಯಾ ಬ್ಯಾಂಕನ್ನು ವಿಲೀನಗೊಳಿಸಲು ಮುಂದಾಗಿದ್ದಾರೆ. ಇದರ ವಿರುದ್ಧ ನಮ್ಮ ಸಂಸದರು ಮತ್ತು ಬಿಜೆಪಿಗರು ಧ್ವನಿ ಎತ್ತದಿರುವುದು ವಿಪರ್ಯಾಸ” ಎಂದವರು ಹೇಳಿದ್ದರು.

ವಿಜಯ ಬ್ಯಾಂಕ್ ವಿಲೀನದ ವಿರುದ್ಧ ಸಾಮಾಜಿಕ  ಜಾಲತಾಣದಲ್ಲೂ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. “ತುಳುನಾಡಿನ ಹೆಮ್ಮೆಯ ವಿಜಯ ಬ್ಯಾಂಕ್ ಇನ್ನು ನೆನಪು ಮಾತ್ರ. ಕೇಂದ್ರ ಸರಕಾರ ನಷ್ಟದಲ್ಲಿರುವ ತನ್ನ ಬ್ಯಾಂಕ್ ಗಳನ್ನು ರಕ್ಷಿಸಲು ವಿಜಯ ಬ್ಯಾಂಕನ್ನು ಬಲಿ ಕೊಟ್ಟಿದೆ. ತುಳುವರ ಅಸ್ಮಿತೆಗೆ ಕೊಡಲಿಪೆಟ್ಟು ಕೊಟ್ಟಿದೆ” ಎಂದು ಡಿವೈಎಫ್ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

“ಮುಲ್ಕಿ ಸುಂದರರಾಮ ಶೆಟ್ಟಿಯವರು ಕಟ್ಟಿದ ಬ್ಯಾಂಕನ್ನು ಯಾವುದೋ ನಷ್ಟದಲ್ಲಿರುವ ಬ್ಯಾಂಕ್ ನೊಂದಿಗೆ ವಿಲೀನಗೊಳಿಸುತ್ತಿದ್ದಾರೆ.
ತುಳುನಾಡಿನ ಹೆಮ್ಮೆಯ ಪುತ್ರ, ಬಂಟ ಸಮುದಾಯದ ಮನೆಮಗ ಸುಂದರರಾಮ ಶೆಟ್ಟಿಯವರ ಪ್ರೀತಿಯ ಕೂಸಿನ ಕತ್ತುಹಿಸುಕಿ ಸಾಯಿಸಲಾಗುತ್ತಿದೆ. ಇನ್ನೇನಿದ್ದರೂ ವಿಜಯ ಬ್ಯಾಂಕ್ ಇತಿಹಾಸದ ಪುಟದ ಒಂದೆರಡು ಸಾಲು” ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ಇಂದು ಸಂಜೆ 5 ಗಂಟೆಗೆ ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಮಾನಮನಸ್ಕರಿಂದ ಪ್ರತಿಭಟನೆ ನಡೆಯಲಿದೆ.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News