×
Ad

ಜ.6ಕ್ಕೆ ಮೀನು ಮಾರುಕಟ್ಟೆಗಳಿಗೆ ಕಡ್ಡಾಯ ರಜೆ ಘೋಷಣೆ

Update: 2019-01-03 18:34 IST

ಉಡುಪಿ, ಜ.3: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ವೇಳೆ 7 ಮಂದಿ ಮೀನುಗಾರರ ಸಹಿತ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್‌ನ ಪತ್ತೆ ಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಒತ್ತಾಯಿಸುವ ಸಲುವಾಗಿ ಕರಾವಳಿಯ ಸಮಸ್ತ ಮೀನುಗಾರಿಕಾ ಸಂಘಟನೆಗಳು ಜ.6ರಂದು ಕರೆ ನೀಡಿರುವ ರಾಷ್ಟ್ರೀಯ ಹೆದ್ದಾರಿ ತಡೆಗೆ ತಮ್ಮ ಸಂಘದ ಸಂಪೂರ್ಣ ಬೆಂಬಲವಿದೆ ಎಂದು ಉಡುಪಿ ತಾಲೂಕು ಮಹಿಳಾ ಹಸಿಮೀನುಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್.ಸಾಲ್ಯಾನ್ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಉಡುಪಿ ತಾಲೂಕು ಹಸಿ ಮೀನುಮಾರಾಟಗಾರರ ಸಂಘ ಸೇರಿದಂತೆ ಕುಂದಾಪುರ ತಾಲೂಕು ಜೈ ಕರ್ನಾಟಕ ಚಿಲ್ಲರೆ ಮೀನು ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಅಂದು ಉಡುಪಿ ಜಿಲ್ಲೆಯ ಎಲ್ಲಾ ಮೀನು ಮಾರುಕಟ್ಟೆಗಳಿಗೆ ಕಡ್ಡಾಯ ರಜೆ ಘೋಷಿಸಲಾಗಿದೆ. ಅಂದು ಮೀನು ಮಾರುಕಟ್ಟೆಗಳಲ್ಲಿ ವಹಿವಾಟು ನಡೆಯುವುದಿಲ್ಲ. ಗ್ರಾಹಕರು ಸಹಕರಿಸಬೇಕು ಎಂದವರು ಮನವಿ ಮಾಡಿದ್ದಾರೆ.

ಉಡುಪಿ ಮತ್ತು ಕುಂದಾಪುರದ ಎರಡೂ ಸಂಘಟನೆಗಳ ಮಹಿಳಾ ಮೀನು ಮಾರಾಟಗಾರರು ಬೆಳಗಿನಿಂದಲೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬೇಬಿ ಎಚ್.ಸಾಲ್ಯಾನ್ ಮತ್ತು ಕುಂದಾಪುರ ತಾಲೂಕು ಜೈ ಕರ್ನಾಟಕ ಚಿಲ್ಲರೆ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷೆ ರತ್ನ ಮೊಗವೀರ ಬೀಜಾಡಿ ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News