×
Ad

ಉಡುಪಿ: ಭವಿಷ್ಯ ನಿಧಿ ಆನ್‌ಲೈನ್ ಅರ್ಜಿ ಸಲ್ಲಿಕೆ ವಿರೋಧಿಸಿ ಧರಣಿ

Update: 2019-01-03 18:53 IST

ಉಡುಪಿ, ಜ.3: ಭವಿಷ್ಯ ನಿಧಿ ಅರ್ಜಿಗಳ ಶೀಘ್ರ ವಿಲೇವಾರಿಗೆ ಒತ್ತಾಯಿಸಿ ಹಾಗೂ ಕಡ್ಡಾಯ ಆನ್‌ಲೈನ್ ಅರ್ಜಿ ಸಲ್ಲಿಕೆಯನ್ನು ವಿರೋಧಿಸಿ ಮಂಗಳೂರು ಎಸ್‌ಕೆ ಬೀಡಿ ವರ್ಕರ್ಸ್‌ ಫೆಡರೇಶನ್ ಆಶ್ರಯದಲ್ಲಿ ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್(ಎಐಟಿಯುಸಿ) ನೇತೃತ್ವದಲ್ಲಿ ಗುರುವಾರ ಉಡುಪಿ ಭವಿಷ್ಯನಿಧಿ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಮಿಕ ಭವಿಷ್ಯನಿಧಿ ಸಂಘಟನೆಯಲ್ಲಿ ಚಂದಾದಾರರಾಗಿರುವವರು ತನ್ನ ಭವಿಷ್ಯನಿಧಿ ಹಾಗೂ ಮುಂಗಡ ಹಣಕ್ಕಾಗಿ ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕೆಂದು ಕೇಂದ್ರ ಸರಕಾರದ ಕಾರ್ಮಿಕ ಮಂತ್ರಾಲಯ ತಾಕೀತು ಮಾಡಿದೆ. ಆದರೆ ಭವಿಷ್ಯನಿಧಿ ಸದಸ್ಯರುಗಳಲ್ಲಿ ಶೇ.80ಕ್ಕಿಂತಲೂ ಅಧಿಕ ಚಂದಾದಾರರು ಬೀಡಿ ಕಾರ್ಮಿಕರಾಗಿದ್ದು ಅವರಲ್ಲಿ ಶೇ.80ಕ್ಕಿಂತಲೂ ಅಧಿಕ ಕಾರ್ಮಿಕರು ಅನಕ್ಷರಸ್ಥರಾಗಿದ್ದಾರೆ. ಇವರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ಅಸಂಘಟಿತ ವಲಯದ ಕಾರ್ಮಿಕರಿಗೆ ಆನ್‌ಲೈನ್ ಅರ್ಜಿ ಸಲ್ಲಿಸುವಲ್ಲಿ ವಿನಾಯಿತಿ ನೀಡಬೇಕು ಎಂದು ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ವಿ.ಕುಕ್ಯಾನ್ ಒತ್ತಾಯಿಸಿದರು.

ಎಐಟಿಯುಸಿ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ವಿ.ಭಟ್ ಮಾತನಾಡಿ, ಶಾಲಾ ವರ್ಗಾವಣಾ ಪ್ರಮಾಣ ಪತ್ರವನ್ನು ಮಾನ್ಯ ಮಾಡಿ ಜನನ ದಿನಾಂಕವನ್ನು ಸರಿಪಡಿಸಬೇಕು.ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಭವಿಷ್ಯ ನಿಧಿ ಅರ್ಜಿಗಳನ್ನು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕೆಂಬ ಕೇಂದ್ರ ಕಾರ್ಮಿಕ ಮಂತ್ರಾಲಯದ ಆದೇಶವನ್ನು ಕೈಬಿಡಬೇಕೆಂದು ಆಗ್ರಹಿಸಿದರು.

ಧರಣಿಯಲ್ಲಿ ಎಸ್‌ಕೆ ಬೀಡಿ ವರ್ಕರ್ಸ್‌ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಸೀತಾರಾಂ ಬೇರಿಂಜ, ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರ್ಯ ದರ್ಶಿ ಬಿ.ಶೇಖರ್ ಬಂಟ್ವಾಳ್, ಉಡುಪಿ ತಾಲೂಕು ಬೀಡಿ ಲೇಬರ್ ಯೂನಿ ಯನ್ ಅಧ್ಯಕ್ಷೆ ಶಾಂತಾ ನಾಯಕ್, ಕಾರ್ಯದರ್ಶಿ ಶಶಿಕಲಾ ಗಿರೀಶ್, ಫೆಡರೇಶನ್‌ನ ಸಹ ಕಾರ್ಯದರ್ಶಿಗಳಾದ ಸುರೇಶ್ ಕುಮಾರ್ ಬಂಟ್ವಾಳ, ಎಂ.ಕರುಣಾಕರ್ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಈ ಕುರಿತ ಮನವಿಯನ್ನು ಉಡುಪಿಯ ಸಹಾಯಕ ಭವಿಷ್ಯ ನಿಧಿ ಆಯುಕ್ತರ ಮೂಲಕ ಕೇಂದ್ರ ಕಾರ್ಮಿಕ ಸಚಿವ ಹಾಗೂ ಕೇಂದ್ರ ಪಿಎಫ್ ಆಯುಕ್ತರಿಗೆ ಸಲ್ಲಿಸಲಾಯಿತು. ಇದಕ್ಕೂ ಮುನ್ನ ಉಡುಪಿ ಮಾರುತಿ ವಿಥಿಕಾ ದಲ್ಲಿರುವ ಯೂನಿಯನ್ ಕಚೇರಿಯಿಂದ ಭವಿಷ್ಯನಿಧಿ ಕಚೇರಿರೆಗೆ ಮೆರವಣಿಗೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News