ಮಾನವಹಕ್ಕುಗಳ ಉಲ್ಲಂಘನೆಯ ಆರೋಪಹೊತ್ತ ಪೊಲೀಸ್ ಅಧಿಕಾರಿಗೆ ಛತ್ತೀಸ್‌ಗಡ ಕಾಂಗ್ರೆಸ್ ಸರಕಾರದಲ್ಲಿ ಪ್ರಮುಖ ಹುದ್ದೆ!
ಹೊಸದಿಲ್ಲಿ,ಜ.3: ಛತ್ತೀಸ್‌ಗಡದ ನೂತನ ಕಾಂಗ್ರೆಸ್ ಸರಕಾರವು ಬಸ್ತಾರ್‌ನ ಮಾಜಿ ಐಜಿಪಿ ಎಸ್‌ಆರ್‌ಪಿ ಕಲ್ಲೂರಿ ಅವರನ್ನು ಆರ್ಥಿಕ ಅಪರಾಧಗಳ ಘಟಕ ಮತ್ತು ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥರನ್ನಾಗಿ ನೇಮಕಗೊಳಿಸಿದೆ.
ಕಲ್ಲೂರಿ ರಾಜ್ಯದಲ್ಲಿ ಅತ್ಯಂತ ವಿವಾದಿತ ಅಧಿಕಾರಿಯಾಗಿದ್ದಾರೆ. 2011ರ ಕಾರ್ಯಾಚರಣೆಗಳ ಸಂದರ್ಭದಲ್ಲಿ ಆದಿವಾಸಿಗಳ ಮನೆಗಳ ದಹನದಲ್ಲಿ ಕಲ್ಲೂರಿ ಭಾಗಿಯಾಗಿದ್ದನ್ನು ನೋಡಿದ್ದ ಇಬ್ಬರು ಸಾಕ್ಷಿಗಳನ್ನು ನವೆಂಬರ್‌ನಲ್ಲಿ ಸೋರಿಕೆಯಾಗಿದ್ದ ಆಂತರಿಕ ಸಿಬಿಐ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ‘ಮೇಲಿನಿಂದ ಸೂಚನೆಗಳು ’ ಬಂದ ಬಳಿಕ ಅಂತಿಮ ಆರೋಪಟ್ಟಿಯಿಂದ ಇಬ್ಬರು ಸಾಕ್ಷಿಗಳ ಹೆಸರುಗಳನ್ನು ತೆಗೆದುಹಾಕಲಾಗಿತ್ತು ಎಂದು ಸುದ್ದಿ ಜಾಲತಾಣ ‘ದಿ ವೈರ್’ ವರದಿ ಮಾಡಿತ್ತು. ಕಲ್ಲೂರಿ ಆಗ ದಾಂತೆವಾಡಾದಲ್ಲಿ ಸೀನಿಯರ್ ಎಸ್‌ಪಿ ಆಗಿದ್ದರು. ಅವರ ಅಧಿಕಾರಾವಧಿಯು ಅತ್ಯಾಚಾರ ಘಟನೆಗಳಿಗೂ ಸಾಕ್ಷಿಯಾಗಿತ್ತು.
2017,ಫೆಬ್ರವರಿಯಲ್ಲಿ ಬಸ್ತಾರ್‌ನ ಲೇಖಕಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ್ತಿ ಬೇಲಾ ಭಾಟಿಯಾರ ಮೇಲೆ ಗುಂಪೊಂದು ದಾಳಿ ನಡೆಸಿದ ಬಳಿಕ ಐಜಿಪಿಯಾಗಿದ್ದ ಕಲ್ಲೂರಿಯವರನ್ನು ಬಸ್ತಾರ್‌ನಿಂದ ಹೊರಗೆ ವರ್ಗಾವಣೆ ಮಾಡಲಾಗಿತ್ತು.
ಕಲ್ಲೂರಿಯವರನ್ನು ಪೊಲೀಸ್ ಕೇಂದ್ರ ಕಚೇರಿಯಲ್ಲಿ ತರಬೇತಿ ಇಲಾಖೆಗೆ ವರ್ಗಾವಣೆಗೊಳಿಸಲಾಗಿತ್ತು. ಮಾನವ ಹಕ್ಕು ಹೋರಾಟಗಾರರ ಮೇಲೆ ರಸ್ತೆಗಳಲ್ಲಿ ವಾಹನಗಳನ್ನು ಹರಿಸಬೇಕು ಎಂದು ಪೊಲೀಸ್ ಅಧಿಕಾರಿಯೋರ್ವ ಆಣಿಮುತ್ತುಗಳನ್ನು ಉದುರಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಅಶಿಸ್ತಿಗಾಗಿ ಕಲ್ಲೂರಿಯವರಿಗೆ ನೋಟಿಸ್‌ಗಳನ್ನು ಹೊರಡಿಸಲಾಗಿತ್ತು ಎಂದು ಸುದ್ದಿ ಜಾಲತಾಣವೊಂದು ತನ್ನ ವರದಿಯಲ್ಲಿ ಹೇಳಿದೆ.
ಮಾನವ ಹಕ್ಕುಗಳ ಉಲ್ಲಂಘನೆಗಳ ಆರೋಪದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಈ ಹಿಂದೆ ಕಲ್ಲೂರಿಯವರಿಗೆ ನೋಟಿಸ್‌ಗಳನ್ನು ಹೊರಡಿಸಿತ್ತು,ಆದರೆ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಅವುಗಳನ್ನು ತಪ್ಪಿಸಿಕೊಂಡಿದ್ದರು. ಈ ಹಿಂದೆ ಬಸ್ತಾರ್‌ನಲ್ಲಿ ಪತ್ರಕರ್ತರು ಮತ್ತು ಮಾನವ ಹಕ್ಕು ಹೋರಾಟಗಾರರಿಗೆ ಬೆದರಿಕೆಗಳನ್ನು ಒಡ್ಡಿದ ಆರೋಪಗಳು ಅವರ ಮೇಲಿದ್ದವು ಎಂದೂ ವರದಿಯು ತಿಳಿಸಿದೆ.