ಮಾಲತಿ ಶೆಟ್ಟಿ ನಾಪತ್ತೆ ಪ್ರಕರಣ: ಮರು ತನಿಖೆಗೆ ಹೈಕೋರ್ಟ್ ನಿರ್ದೇಶನ
ಉಡುಪಿ, ಜ.3: 2015ರ ಜೂನ್24ರಂದು ಅಪರಾಹ್ನ 1:30ರ ಸುಮಾರಿಗೆ ತೆಕ್ಕಟ್ಟೆ ಸಮೀಪದ ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ಎಂಬಲ್ಲಿರುವ ತನ್ನ ಮನೆಯಿಂದ ನಿಗೂಢವಾಗಿ ನಾಪತ್ತೆಯಾದ ಕೆ. ಭಾಸ್ಕರ ಶೆಟ್ಟಿ ಅವರ ಪತ್ನಿ ಕೊರ್ಗಿ ಮಾಲತಿ ಶೆಟ್ಟಿ (65) ಪ್ರಕರಣದ ಮರು ತನಿಖೆ ನಡೆಸುವಂತೆ ರಾಜ್ಯ ಉಚ್ಛ ನ್ಯಾಯಾಲಯ ನೀಡಿದ ನಿರ್ದೇಶನದಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಾಗಿದೆ ಎಂದು ಮಾಲತಿ ಶೆಟ್ಟಿ ಅವರ ಪುತ್ರ ಸತೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಮೆರಿಕದಲ್ಲಿರುವ ಮಾಲತಿ ಶೆಟ್ಟಿ ಅವರ ಪುತ್ರ ಸತೀಶ್ ಶೆಟ್ಟಿ, ತಾಯಿಯ ಪತ್ತೆಗಾಗಿ ಇತ್ತೀಚೆಗೆ ರಾಜ್ಯ ಹೈಕೋರ್ಟ್‌ನಲ್ಲಿ ನ್ಯಾಯವಾದಿ ಎಚ್.ಪವನ್ ಕುಮಾರ್ ಶೆಟ್ಟಿ ಅವರ ಮೂಲಕ ದಾಖಲಿಸಿದ ಎರಡನೇ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯ, 2015ರಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದಿರುವ ಅನಾಮಧೇಯ ಪತ್ರವೊಂದರ ಆಧಾರದಲ್ಲಿ ಇಡೀ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಉಡುಪಿಯ ಪೊಲೀಸ್ ಅಧೀಕ್ಷಕರಿಗೆ ಆದೇಶಿಸಿದ್ದು, ಅದರಂತೆ ಇದೀಗ ಕುಂದಾಪುರ ಠಾಣೆಯಲ್ಲಿ ಸ್ಥಳೀಯರಾದ ಆರು ಮಂದಿಯ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿ ಮರು ತನಿಖೆ ನಡೆಸಲಾಗುತ್ತಿದೆ.
2015ರ ಸಾಲಿನಲ್ಲೇ ಈ ಅನಾಮಧೇಯ ಪತ್ರ ಬಂದಿದ್ದು, ಈ ಕುರಿತು ಪೊಲೀಸರು ವಿಚಾರಣೆಯನ್ನು ನಡೆಸಿದ್ದರು. ಆದರೆ ಇದೀಗ ಸತೀಶ್ ಶೆಟ್ಟಿ ಸಲ್ಲಿಸಿದ ಎರಡನೇ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆ, ಈ ಅರ್ಜಿಯ ವಿಚಾರದ ಬಗ್ಗೆ ಕಾನೂನು ಕ್ರಮ ಜರಗಿಸುವಂತೆ ನ್ಯಾಯಾಲಯ ಆದೇಶಿಸಿತ್ತು.
ಅನಾಮಧೇಯ ಅರ್ಜಿಯಲ್ಲಿ ತಿಳಿಸಿರುವಂತೆ ಕೊರ್ಗಿಯ ಭಾಸ್ಕರ ಶೆಟ್ಟಿ ಅವರ ಪತ್ನಿ ಮಾಲತಿ ಶೆಡ್ತಿಯವರು ಕಾಣೆಯಾದ ದಿನದಂದು (2015ರ ಜೂ.24) ಒಂದು ಮಾರುತಿ ಓಮ್ನಿಯಲ್ಲಿ ಹೋಗಿದ್ದು, ಈ ಓಮ್ನಿ ಹರ್ಷ ಎನ್ನುವ ವ್ಯಕ್ತಿಗೆ ಸೇರಿದೆ. ಆ ದಿನ ಓಮ್ನಿಯಲ್ಲಿ ಹುಲಿಯ, ಹರ್ಷ, ಗೋಪಾಲ (ಚೀಂಕ್ರ), ದಿನೇಶ್, ಸಂದೀಪ, ಪ್ರದೀಪ (ಸೂರ ಹರಿಜನ) ಎನ್ನುವವರು ಇದ್ದಿರುತ್ತಾರೆ. ಇವರು ಮಾಲತಿ ಶೆಡ್ತಿಯವರನ್ನು ಹೊಡೆದು ಅವರಲ್ಲಿದ್ದ ಚಿನ್ನವನ್ನು ಕಸಿದುಕೊಂಡು, ದೇಹವನ್ನು ಹುಗಿದು ಹಾಕಿದ್ದಾರೆ. ಇವರನ್ನೆಲ್ಲಾ ವಿಚಾರಣೆ ನಡೆಸಿ ಮಾಲತಿ ಶೆಡ್ತಿಯವರ ಮನೆಯವರಿಗೆ ನ್ಯಾಯ ಕೊಡಿಸುವಂತೆ ಪತ್ರದಲ್ಲಿ ವಿನಂತಿಸಲಾಗಿತ್ತು.
ಕೋರ್ಟ್‌ನ ಆದೇಶದಂತೆ ಪ್ರಕರಣದ ಕುರಿತು ಡಿ.20ರಂದು ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಹೊಸ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ. ಪ್ರಕರಣದಲ್ಲಿ ಆರು ಮಂದಿಯನ್ನು - ಹರ್ಷ (25ವರ್ಷ-ರಿಕ್ಷಾಚಾಲಕ), ಹುಲಿಯಾ (46-ಕಾರ್ಮಿಕ), ಗೋಪಾಲ (29- ರೈತ), ದಿನೇಶ (25-ಕಾರ್ಮಿಕ), ಸಂದೀಪ (23) ಹಾಗೂ ಪ್ರದೀಪ್ (21-ಕಾರ್ಮಿಕ)ರನ್ನು ಆರೋಪಿಗಳಾಗಿ ಹೆಸರಿಸಲಾಗಿದೆ. ಇವರೆಲ್ಲರೂ ಕೊರ್ಗಿ ಗ್ರಾಮದ ಹೊಸ್ಮಠ ಸಗೀನಗುಡ್ಡೆಯವರು.
ಪ್ರಕರಣದ ಹಿನ್ನೆಲೆ: ಕೊರ್ಗಿ ಗ್ರಾಮದ ಚಾರುಕೊಟ್ಟಿಗೆಯ ಮನೆಯಲ್ಲಿ ಪತಿ ಭಾಸ್ಕರ ಶೆಟ್ಟಿ, ಪುತ್ರಿ ಹಾಗೂ ಅಳಿಯನೊಂದಿಗೆ ಸ್ವಂತ ಮನೆಯಲ್ಲಿ ವಾಸವಾಗಿದ್ದ ಮಾಲತಿ ಶೆಟ್ಟಿ (65) ಎಂದಿನಂತೆ ಜೂ.24ರ ಅಪರಾಹ್ನ ಪತಿಗೆ ಊಟ ಬಡಿಸಿ, ತಾನು ಊಟ ಮಾಡಿ, ಸಂಜೆಯ ಭೋಜನಕ್ಕೆ ಅನ್ನ ಮಾಡಲು ಸಿದ್ಧತೆ ನಡೆಸಿ ಪಕ್ಕದ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಲ್ಲಿ ಧರಿಸಿದ ಸಾಧಾರಣ ಉಡುಪಿನಲ್ಲೇ 1:30ರ ಸುಮಾರಿಗೆ ತೆರಳಿದವರು ಅನಂತರ ಯಾರ ಕಣ್ಣಿಗೂ ಬಿದ್ದಿಲ್ಲ.
ಮಾಲತಿ ಶೆಟ್ಟಿ ಅವರ ನಾಪತ್ತೆ ಕುರಿತು ಮರುದಿನವೇ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತಾಯಿ ನಾಪತ್ತೆ ಸುದ್ದಿ ಕೇಳಿ ಕಳೆದ ಜು.4ರಂದೇ ಅಮೆರಿಕದಿಂದ ಊರಿಗೆ ಧಾವಿಸಿ ಬಂದಿದ್ದ ಮಾಲತಿ ಶೆಟ್ಟಿ ಅವರ ಪುತ್ರ ಸತೀಶ್ ಶೆಟ್ಟಿ, ಅಂದಿನಿಂದ ಪೊಲೀಸರ ನೆರವಿನೊಂದಿಗೆ ಸತತವಾಗಿ ತಾಯಿಯ ಪತ್ತೆ ಕಾರ್ಯದಲ್ಲಿ ನಿರತವಾಗಿದ್ದರೂ ಇದುವರೆಗೆ ಆಕೆಯ ಕುರಿತಂತೆ ಯಾವುದೇ ಸುಳಿವು ಸಿಕ್ಕಿಲ್ಲ. ತಾಯಿಯ ಪತ್ತೆಗೆ ಸಾರ್ವಜನಿಕರ ನೆರವನ್ನು ಕೋರಿದ್ದ ಅವರು, ತಾಯಿಯನ್ನು ಪತ್ತೆ ಹಚ್ಚಿಕೊಟ್ಟವರಿಗೆ ಒಂದು ಲಕ್ಷ ರೂ.ಬಹುಮಾನವನ್ನೂ ಘೋಷಿಸಿದ್ದರು.
ಮನೆಯಲ್ಲಿ ಧರಿಸುವ ಸಾಮಾನ್ಯ ಉಡುಪು ಧರಿಸಿದ್ದ ಮಾಲತಿ ಶೆಟ್ಟಿ, ಹಣ, ಮೊಬೈಲ್ ಸೇರಿದಂತೆ ಏನನ್ನೂ ಒಯ್ದಿರಲಿಲ್ಲ. ಆದರೆ ಆಕೆ ಪ್ರತಿದಿನ ಧರಿಸುವ ಸುಮಾರು 3.50 ಲಕ್ಷ ರೂ. ಮೌಲ್ಯದ ಕರಿಮಣಿ ಸೇರಿದಂತೆ ಚಿನ್ನಾಭರಣ ಆಕೆಯ ಮೈಮೇಲಿದ್ದು, ಇದರ ಆಸೆಗಾಗಿ ಯಾರಾದರೂ ಅಪಹರಿಸಿರ ಬಹುದೆಂಬ ಸಂಶಯವಿದ್ದಿದ್ದರೂ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಸಿಕ್ಕಿರಲಿಲ್ಲ.
ಸುಮಾರು ಆರು ತಿಂಗಳು ನಾಪತ್ತೆಯಾದ ಮಾಲತಿ ಶೆಟ್ಟಿ ಪತ್ತೆಗಾಗಿ ಅವಿರತ ಪ್ರಯತ್ನ ನಡೆಸಿದ ಕುಟುಂಬಿಕರು ಅದೇ ವರ್ಷದ ನವೆಂಬರ್ ತಿಂಗಳಲ್ಲಿ ರಾಜ್ಯ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆಗಲೂ ಅರ್ಜಿಯ ವಿಚಾರಣೆ ನಡೆದು ಪೊಲೀಸರು ತೀವ್ರ ಶೋಧನೆ ನಡೆಸಿದ್ದರೂ, ಮಾಲತಿ ಶೆಟ್ಟಿ ಪತ್ತೆಯಾಗಿರಲಿಲ್ಲ. ಇದೀಗ ಸತೀಶ್ ಶೆಟ್ಟಿ ಇತ್ತೀಚೆಗೆ ಎರಡನೇ ಬಾರಿಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.