‘500 ಮಂದಿ ಆಹಾರದ ಬಿಲ್ ಪಡೆಯುತ್ತಿರುವ ಗುತ್ತಿಗೆದಾರರು’
ಮಂಗಳೂರು, ಜ.3: ನಗರದ ಐದು ಇಂದಿರಾ ಕ್ಯಾಂಟೀನ್‌ಗಳಿಗೆ ಮನಪಾ ಮತ್ತು ಕಾರ್ಮಿಕ ಇಲಾಖೆಯಿಂದ ಬಿಲ್ ಪಾವತಿಯಲ್ಲಿ ಅವ್ಯವಹಾರ ನಡೆಯುತ್ತಿದೆ. ಪ್ರತಿ ಇಂದಿರಾ ಕ್ಯಾಂಟೀನ್‌ಗೆ ಪ್ರತಿದಿನ 150 ಮಂದಿಯಷ್ಟೇ ಗ್ರಾಹಕರು ಆಗಮಿಸುತ್ತಿದ್ದರೂ, 500 ಮಂದಿ ಆಹಾರ ಸೇವನೆ ಮಾಡಿದ್ದಾರೆ ಎಂದು ಗುತ್ತಿಗೆದಾರರು ಬಿಲ್ ಪಡೆಯುತ್ತಿದ್ದಾರೆ ಎಂದು ಮಂಗಳೂರು ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ಆರೋಪಿಸಿದ್ದಾರೆ.
ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗ್ಗಿನ ತಿಂಡಿಗೆ 5 ರೂ., ಮಧ್ಯಾಹ್ನ, ರಾತ್ರಿ ಊಟಕ್ಕೆ 10 ರೂ. ನಿಗದಿಪಡಿಸಲಾಗಿದೆ. ಸ್ಥಳೀಯ ಸಂಸ್ಥೆ ಮತ್ತು ಕಾರ್ಮಿಕ ಇಲಾಖೆಯಿಂದ ಒಂದು ತಿಂಡಿಗೆ ಏಳು ರೂ., ಊಟಕ್ಕೆ 14 ರೂ. ಗುತ್ತಿಗೆದಾರರಿಗೆ ಪಾವತಿಯಾಗುತ್ತಿದೆ. ಈ ಪೈಕಿ ನಗರಪಾಲಿಕೆ ಶೇ.70ರಷ್ಟು ಹಣ, ಕಾರ್ಮಿಕ ಇಲಾಖೆ ಶೇ.30ರಷ್ಟು ಹಣ ಭರಿಸುತ್ತಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರತಿದಿನ 100ರಿಂದ 150 ಮಂದಿಯಷ್ಟೇ ತಿಂಡಿ, ಊಟಕ್ಕೆ ಆಗಮಿಸುತ್ತಿದ್ದಾರೆ. ಆದರೆ, ಗುತ್ತಿಗೆದಾರರಿಗೆ ಪ್ರತಿದಿನದ 500 ಮಂದಿಯ ಬಿಲ್ ಮೊತ್ತ ಪಾವತಿಯಾಗುತ್ತಿದೆ. ಈ ಬಗ್ಗೆ ಮೇಯರ್ ಮತ್ತು ಅಧಿಕಾರಿಗಳು ಉತ್ತರಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.
ಸಾಯಿ ಹಾಸ್ಪಿಟಾಲಿಟಿ ಎಂಬ ಸಂಸ್ಥೆ ಇಂದಿರಾ ಕ್ಯಾಂಟೀನ್ ಗುತ್ತಿಗೆ ವಹಿಸಿಕೊಂಡಿದೆ. ಈ ಸಂಸ್ಥೆಗೆ ನೀಡುವ ಬಿಲ್ ಮಹಾನಗರ ಪಾಲಿಕೆಯಲ್ಲಿ ತಯಾರಾಗುತ್ತಿದೆ. ಇಂದಿರಾ ಕ್ಯಾಂಟೀನ್‌ಗೆ ಪ್ರತಿದಿನ ಎಷ್ಟು ಮಂದಿ ಆಗಮಿಸುತ್ತಿದ್ದಾರೆ ಎಂಬುದಕ್ಕೆ ಯಾವ ರೀತಿಯಲ್ಲಿ ನಿಗಾ ವಹಿಸಲಾಗಿದೆ ಎಂಬುದನ್ನು ಮೇಯರ್ ಸ್ಪಷ್ಟಪಡಿಸಬೇಕು.
ಇಂದಿರಾ ಕ್ಯಾಂಟೀನ್ ಕಟ್ಟಡದ ವಿದ್ಯುತ್ ಸಂಪರ್ಕ, ಚರಂಡಿ, ಆವರಣ ಗೋಡೆ, ಇಂಟರ್‌ಲಾಕ್ ಅಳವಡಿಕೆಗೂ ಮನಪಾದಿಂದ 80 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಆದರೆ, ಮನಪಾ ಅನುದಾನವನ್ನು ಇಂದಿರಾ ಕ್ಯಾಂಟೀನ್‌ಗೆ ಬಳಸಿರುವ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ ಎಂದು ಆರೋಪಿಸಿದರು.
ಕ್ಲಾಕ್ ಟವರ್ ಕಾಮಗಾರಿ ವಿಳಂಬ: ನಗರದ ಹಂಪನಕಟ್ಟೆ ಕ್ಲಾಕ್ ಟವರ್ ಬಳಿಯಿಂದ ಎ.ಬಿ. ಶೆಟ್ಟಿ ವೃತ್ತದವರೆಗಿನ ರಸ್ತೆಯನ್ನು ಏಕಮುಖವಾಗಿಸುವ ಪ್ರಸ್ತಾವನೆ ಪೊಲೀಸ್ ಇಲಾಖೆ ಮುಂದಿದೆ. ನೂತನ ಕ್ಲಾಕ್ ಟವರ್‌ನಿಂದ ಸಂಚಾರಕ್ಕೆ ತೊಡಗು ಉಂಟಾಗುತ್ತದೆ ಎಂಬ ಸಮಸ್ಯೆಯೂ ಇದರಿಂದ ಬಗೆಹರಿಯಲಿದೆ. ಈ ಕಾರಣದಿಂದ ಕ್ಲಾಕ್ ಟವರ್ ಕಾಮಗಾರಿ ವಿಳಂಬಗೊಂಡಿದೆ ಎಂದು ಪ್ರೇಮಾನಂದ ಶೆಟ್ಟಿ ತಿಳಿಸಿದರು.
ಮನಪಾ ಸದಸ್ಯರಾದ ಗಣೇಶ ಹೊಸಬೆಟ್ಟು, ಸುಧೀರ್ ಶೆಟ್ಟಿ ಕಣ್ಣೂರು, ರೂಪಾ ಡಿ. ಬಂಗೇರ, ವಿಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.