ಹಿಮಪಾತದಿಂದ ಓರ್ವ ಯೋಧ ಮೃತ್ಯು, ಇನ್ನೋರ್ವನಿಗೆ ಗಾಯ
Update: 2019-01-03 20:43 IST
ಪೂಂಛ್, ಜ. 3: ಜಮ್ಮು ಹಾಗೂ ಕಾಶ್ಮೀರದ ಪೂಂಛ್ ಜಿಲ್ಲೆಯ ಸಾವ್‌ಜಿಯಾನ್ ವಲಯದ ಸೇನಾ ಠಾಣೆಯ ಮೇಲೆ ಗುರುವಾರ ಹಿಮಪಾತದಿಂದಾಗಿ ಸೇನಾ ಯೋಧರೊಬ್ಬರು ಮೃತಪಟ್ಟಿದ್ದಾರೆ ಹಾಗೂ ಇನ್ನೋರ್ವ ಯೋಧ ಗಾಯಗೊಂಡಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿ ಇರುವ ಸಾವ್‌ಜಿಯಾನ್ ವಲಯದ ಮುಂಚೂಣಿ ಪ್ರದೇಶದಲ್ಲಿರುವ ಕೆ.ಕೆ. ಗಾಲ್ಕಿಯಲ್ಲಿ ಗುರುವಾರ ಬೆಳಗ್ಗೆ 40 ಆರ್‌ಆರ್ ಸೇನಾ ಠಾಣೆಯ ಮೇಲೆ ಹಿಮಪಾತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಇಬ್ಬರು ಯೋಧರು ಹಿಮದ ಅಡಿಯಲ್ಲಿ ಸಿಲುಕಿಕೊಂಡರು. ಆದಾಗ್ಯೂ, ಓರ್ವ ಸ್ಥಳದಲ್ಲೇ ಮೃತಪಟ್ಟರು. ಇನ್ನೋರ್ವ ಗಂಭೀರ ಗಾಯಗೊಂಡರು.
ಮೃತಪಟ್ಟ ಯೋಧನನ್ನು ಹಿಮಾಚಲ ಪ್ರದೇಶದ ಕಾಂಗ್ರದ ಲ್ಯಾನ್ಸ್ ನಾಯಕ್ ಸಪನ್ ಮೆಹ್ರಾ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಯೋಧನನ್ನು ಪಂಜಾಬ್‌ನ ಹರ್ಪೀತ್ ಸಿಂಗ್ ಎಂದು ಗುರುತಿಸಲಾಗಿದೆ. ಅವರನ್ನು ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಂಡಿಯ ಠಾಣಾಧಿಕಾರಿ (ಎಸ್‌ಎಚ್‌ಒ) ಅನಿಲ್ ಶರ್ಮಾ ಘಟನೆಯನ್ನು ದೃಢಪಡಿಸಿದ್ದಾರೆ.