ಪಶ್ಚಿಮ ಬಂಗಾಳದಲ್ಲಿ ರಥಯಾತ್ರೆ: ಬಿಜೆಪಿ ಮನವಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ
ಹೊಸದಿಲ್ಲಿ, ಜ. 3: ಪಶ್ಚಿಮ ಬಂಗಾಳದಲ್ಲಿ ರಥಯಾತ್ರೆಗೆ ಅವಕಾಶ ನಿರಾಕರಿಸಿ ಕೋಲ್ಕತ್ತಾ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಪ್ರಶ್ನಿಸಿ ಪಶ್ಚಿಮಬಂಗಾಳ ಬಿಜೆಪಿ ಸಲ್ಲಿಸಿದ ಮನವಿಯನ್ನು ಜನವರಿ 7ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಕೊಂಡಿದೆ.
ಈ ವಿಷಯವನ್ನು ತುರ್ತು ವಿಚಾರಣೆ ನಡೆಸಬೇಕು ಎಂಬ ಆಗ್ರಹಕ್ಕೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಹಾಗೂ ನ್ಯಾಯಮೂರ್ತಿ ಎಸ್.ಕೆ. ಕೌಲ್ ಅವರನ್ನು ಒಳಗೊಂಡ ಪೀಠ ಜನವರಿ 7ರಂದು ವಿಚಾರಣೆ ನಡೆಸಲು ಒಪ್ಪಿಕೊಂಡಿದೆ. 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 42 ಸಂಸದೀಯ ಕ್ಷೇತ್ರಗಳಲ್ಲಿ ಒಳಗೊಳ್ಳುವಂತೆ ‘ಪ್ರಜಾಪ್ರಭುತ್ವ ಉಳಿಸಿ’ ರ್ಯಾಲಿ ನಡೆಸಲು ಅನುಮತಿ ನೀಡುವಂತೆ ಕೋರಿ ಬಿಜೆಪಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿತ್ತು.
ಏಕಸದಸ್ಯ ಪೀಠ ಯಾತ್ರೆಗೆ ಅನುಮತಿ ನೀಡಿರುವುದನ್ನು ತಿರಸ್ಕರಿಸಿ ಉಚ್ಚ ನ್ಯಾಯಾಲಯದ ವಿಭಾಗೀಯ ನ್ಯಾಯಪೀಠ ಡಿಸೆಂಬರ್ 21ರಂದು ನೀಡಿರುವ ಆದೇಶ ಪ್ರಶ್ನಿಸಿ ಬಿಜೆಪಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿತ್ತು.