×
Ad

ವಿಮಾನದಲ್ಲಿ ಹೃದಯಾಘಾತ: ಪ್ರಥಮ ಚಿಕಿತ್ಸೆ ನೀಡಿ ಮಹಿಳೆಯ ಪ್ರಾಣ ಉಳಿಸಿದ ಮಂಗಳೂರಿನ ವೈದ್ಯ

Update: 2019-01-03 21:52 IST

ಜಿದ್ದಾದಿಂದ ಮಂಗಳೂರಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಹೃದಯಾಘಾತಕ್ಕೊಳಗಾದ ಮಹಿಳೆಯೊಬ್ಬರನ್ನು ಉಪ್ಪಳ ಮೂಲದ, ಮಂಗಳೂರಿನ ನಿವಾಸಿಯಾಗಿರುವ ವೈದ್ಯರೊಬ್ಬರು ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿರುವ ಬಗ್ಗೆ ವರದಿಯಾಗಿದೆ.

ಮೂಲತಃ ಉಪ್ಪಳದವರಾಗಿರುವ ಡಾ. ಎ.ಕೆ. ಖಾಸಿಮ್ ಮಂಗಳೂರಿನ ನಿವಾಸಿಯಾಗಿದ್ದಾರೆ. ಸೌದಿ ಅರೇಬಿಯಾದ ಮಕ್ಕಾದಲ್ಲಿರುವ ಏಷಿಯನ್ ಪಾಲಿ ಕ್ಲಿನಿಕ್ ಆಸ್ಪತ್ರೆಯ ಜನರಲ್ ಫಿಸಿಷನ್ ಹಾಗೂ ಇನ್ಸೂರೆನ್ಸ್ ವಿಭಾಗದ ಮುಖ್ಯಸ್ಥರಾಗಿರುವ ಅವರು, ಇತ್ತೀಚೆಗೆ ರಜೆ ನಿಮಿತ್ತ ವಿಮಾನ ಮೂಲಕ ಜಿದ್ದಾದಿಂದ ಮಂಗಳೂರಿಗೆ ಮುಂಬೈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

ಸೌದಿ ಕಾಲಮಾನ ರಾತ್ರಿ 1 ಗಂಟೆಗೆ ಜೆಟ್ ಏರ್ ವೇಸ್ ವಿಮಾನ ಜಿದ್ದಾದಿಂದ ಮುಂಬೈಗೆ ಹೊರಟಿತ್ತು. ಮಧ್ಯರಾತ್ರಿ ಎರಡೂವರೆ ಗಂಟೆಗೆ ವಿಮಾನದಲ್ಲಿ ಮುಂಬೈ ಮೂಲದ 55ರ ಹರೆಯದ ಫಾತಿಮಾ ಎಂಬವರಿಗೆ ಹೃದಯಾಘಾತವಾಗಿತ್ತು. “ವಿಮಾನ ಪ್ರಯಾಣಿಕರಲ್ಲಿ ಯಾರಾದರೂ ವೈದ್ಯರಿದ್ದಾರೆಯೇ ?” ಸಿಬ್ಬಂದಿ ಪ್ರಶ್ನಿಸಿದ್ದು,  ಡಾ. ಖಾಸಿಮ್ ತಕ್ಷಣ ಕಾರ್ಯ ಪ್ರವೃತ್ತರಾದರು.

ವಿಮಾನ ಸಿಬ್ಬಂದಿಗೆ ತನ್ನ ವೈದ್ಯಕೀಯ ಲೈಸನ್ಸನ್ನು ಅವರು ನೀಡಿದ್ದು, ಅದರ ವಿವರ ದಾಖಲಿಸಿದ ಬಳಿಕ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆಗೆ ಖಾಸಿಮ್ ರಿಗೆ ಅನುವು ಮಾಡಿಕೊಟ್ಟರು. ಡಾ.ಖಾಸಿಮ್ ಅವರು ಮಹಿಳೆಯನ್ನು ಪರೀಕ್ಷಿಸುವಾಗ ಹೃದಯಾಘಾತವಾಗಿ ಉಸಿರು ನಿಂತಿತ್ತು. ಖಾಸಿಮ್ ತಕ್ಷಣ ಎದೆಬಡಿತ ಪರೀಕ್ಷಿಸಿದರು. ಸತತ ಎರಡು ನಿಮಿಷಗಳ ಪ್ರಯತ್ನದ ಬಳಿಕ ನಾಡಿ ಮಿಡಿತಗೊಂಡಿತು. ನಿಶ್ಶಬ್ಧಗೊಂಡಿದ್ದ ಹೃದಯ ಸ್ತಂಭಿಸಿತು.

ಮಹಿಳೆಯನ್ನು ವಿಮಾನದ ಎದುರು ಭಾಗದಲ್ಲಿ ಬಿಸಿನೆಸ್ ಕ್ಲಾಸ್ ಸೀಟ್ ಮಧ್ಯೆ ಇರುವ ಐಲ್ (ನಡೆದಾಡುವ ಮಧ್ಯ ಭಾಗ) ನಲ್ಲಿ ಮಲಗಿಸಲಾಯಿತು. ವಿಮಾನದಲ್ಲಿದ್ದ ಮೆಡಿಕಲ್ ಕಿಟ್ ನಲ್ಲಿದ್ದ Adrenaline, Atropine ಚುಚ್ಚುಮದ್ದನ್ನು ಮಹಿಳೆಗೆ ನೀಡಲಾಯಿತು. ವಿಮಾನದ ಪೈಲಟ್ ಬೇರೆಡೆ ಎಮರ್ಜೆನ್ಸಿ ಲ್ಯಾಂಡ್ ಮಾಡಬೇಕೇ ಎಂದು ಕೇಳಿದಾಗ ಬೇಡವೆಂದು ಧೈರ್ಯ ತುಂಬಿದರು ಡಾ. ಖಾಸಿಮ್. ಶ್ವಾಸ ನಿಂತಿದ್ದ ಮುಂಬೈ ಮೂಲದ ಮಹಿಳೆ ಫಾತಿಮಾ ವಿಮಾನದಲ್ಲೇ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು.

ವಿಮಾನ ಮುಂಬೈ ತಲುಪುವ ತನಕ ಡಾ. ಖಾಸಿಮ್ ಮಲಗದೇ ಮಹಿಳೆಯ ಶುಶ್ರೂಷೆ ಮಾಡುತ್ತಿದ್ದರು. ಮುಂಬೈಯಲ್ಲಿ ಲ್ಯಾಂಡ್ ಆದ ತಕ್ಷಣ ಮಹಿಳೆಯನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಆಪತ್ಬಾಂಧವರಾದ ಮಂಗಳೂರಿನ ವೈದ್ಯ ಡಾ.ಖಾಸಿಮ್ ಅವರ ನಿಸ್ವಾರ್ಥ ಸೇವೆಗೆ ವಿಮಾನದಲ್ಲಿದ್ದ ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸಿದರು. ಈ ಬಗ್ಗೆ ಡಾ.ಖಾಸಿಮ್ ಅವರು ತಮ್ಮ ಫೇಸ್ಬುಕ್ (AK Kasim) ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಇವರು ಮಂಗಳೂರು ಎಂ. ಫ್ರೆಂಡ್ಸ್ ಸಾಮಾಜಿಕ ಸಂಸ್ಥೆಯ ಅನಿವಾಸಿ ಸದಸ್ಯ.

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News