ಹುದ್ದೆಗಳನ್ನು ತುಂಬುವಲ್ಲಿ ವಿಳಂಬ: ‘ಮುಖ್ಯಸ್ಥ’ನಿಲ್ಲದ ಸಿಬಿಐಗೆ ಸಂಸದೀಯ ಸಮಿತಿಯ ತರಾಟೆ

Update: 2019-01-03 16:43 GMT

ಹೊಸದಿಲ್ಲಿ,ಜ.3: ಮುಖ್ಯಸ್ಥರಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಸಿಬಿಐನಲ್ಲಿ ಹಲವಾರು ಹುದ್ದೆಗಳು ಖಾಲಿಯಿರುವ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿರುವ ಸಂಸದೀಯ ಸಮಿತಿಯು, ಈ ಸಂಸ್ಥೆಯಲ್ಲಿ ಸಿಬ್ಬಂದಿಗಳ ಕೊರತೆಯಾಗದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರಕಾರಕ್ಕೆ ಸೂಚಿಸಿದೆ.

ಇಂಟರ್‌ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಫಾರೆನ್ಸಿಕ್ ಸೈನ್ಸ್-ಸಿಬಿಐನ ಸ್ಥಾಪನೆ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿರುವುದನ್ನೂ ಸಮಿತಿಯು ಗುರುವಾರ ಸಂಸತ್ತಿನಲ್ಲಿ ಮಂಡಿಸಿದ ತನ್ನ ವರದಿಯಲ್ಲಿ ಆಕ್ಷೇಪಿಸಿದೆ. ಈ ಕೇಂದ್ರಕ್ಕೆ ಗೃಹ ವ್ಯವಹಾರಗಳ ಸಚಿವಾಲಯದ ಅನುಮತಿ ಇನ್ನಷ್ಟೇ ದೊರೆಯಬೇಕಿದೆ.

ಸಿಬಿಐನ ವಿವಿಧ ಹಂತಗಳಲ್ಲಿ ಸಿಬ್ಬಂದಿಗಳ ಕೊರತೆ ಕಾಯಂ ಸಮಸ್ಯೆಯಾಗಿದೆ. ಸಮಿತಿಯು ಹಲವಾರು ಸಂದರ್ಭಗಳಲ್ಲಿ ಈ ಬಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ಯಾವುದೇ ಸಂಸ್ಥೆಯಲ್ಲಿ ಹುದ್ದೆಗಳು ಖಾಲಿಯಾಗುವುದನ್ನು ಸಾಕಷ್ಟು ಮೊದಲೇ ನಿರೀಕ್ಷಿಸಬಹುದು ಮತ್ತು ಅವುಗಳನ್ನು ಸಕಾಲದಲ್ಲಿ ತುಂಬಲು ಪೂರ್ವ ನಿಯಾಮಕ ಪ್ರಯತ್ನಗಳನ್ನು ಆರಂಭಿಸಬೇಕಾಗುತ್ತದೆ, ಇಂತಹ ಸ್ಥಿತಿಯನ್ನು ನಿರೀಕ್ಷಿಸುವಲ್ಲಿ ಸಿಬಿಐ ವಿಫಲಗೊಂಡಿರುವಂತಿದೆ ಎಂದು ಹೇಳಿರುವ ಸಮಿತಿಯು,ಹುದ್ದೆಗಳ ಭರ್ತಿಯಲ್ಲಿ ಸಂಭಾವ್ಯ ವಿಳಂಬವನ್ನು ತಪ್ಪಿಸಲು ನಿಯಮಗಳನ್ನು ಪರಿಷ್ಕರಿಸಬಹುದಾಗಿದೆ ಎಂದೂ ತಿಳಿಸಿದೆ.

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಅವರು ಪರಸ್ಪರರ ವಿರುದ್ಧ ಭ್ರಷ್ಟಾಚಾರ ಮತ್ತು ಇತರ ಅಕ್ರಮಗಳ ಆರೋಪಗಳೊಂದಿಗೆ ಬಹಿರಂಗ ಕಚ್ಚಾಟದಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ ಸರಕಾರವು ಅವರ ಅಧಿಕಾರಗಳನ್ನು ಕಿತ್ತುಕೊಂಡು ಕಡ್ಡಾಯ ರಜೆಯಲ್ಲಿ ಕಳುಹಿಸಿರುವುದರಿಂದ ಸಿಬಿಐ ಈಗ ನಿಯಮಿತ ಮುಖ್ಯಸ್ಥರಿಲ್ಲದೆ ಕಾರ್ಯಾಚರಿಸುತ್ತಿದೆ.

ಆಂತರಿಕ ಭದ್ರತೆ, ಸೈಬರ್ ಅಪರಾಧಗಳು, ಭ್ರಷ್ಟಾಚಾರ, ಹಣಕಾಸು ಅಕ್ರಮಗಳಂತಹ ಹಲವಾರು ಪ್ರಕರಣಗಳನ್ನು ಸಿಬಿಐಗೆ ವಹಿಸುವುದು ಹೆಚ್ಚುತ್ತಿದೆ ಮತ್ತು ಇಂತಹ ಸಂದರ್ಭದಲ್ಲಿ ಸಿಬಿಐ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿರುವುದನ್ನು ದೇಶವು ಸಹಿಸುವುದಿಲ್ಲ ಎಂದು ಹೇಳಿರುವ ಸಮಿತಿಯು,ಸಮರ್ಥ ಅಧಿಕಾರಿಗಳನ್ನು ಉಳಿಸಿಕೊಳ್ಳಲು ಮತ್ತು ರಾಜ್ಯ ಪೊಲೀಸ್ ಪಡೆಗಳು,ಕೇಂದ್ರೀಯ ಅರೆ ಸೇನಾಪಡೆಗಳು ಮತ್ತು ಗುಪ್ತಚರ ಸಂಸ್ಥೆ ಇತ್ಯಾದಿಗಳ ಅತ್ಯುತ್ತಮ ಅಧಿಕಾರಿಗಳನ್ನು ಆಕರ್ಷಿಸಲು ಸಿಬಿಐಗೆ ಪ್ರಭಾರ ನಿಯೋಜನೆಯ ಷರತ್ತುಗಳನ್ನು ಹೆಚ್ಚು ಆಕರ್ಷಕಗೊಳಿಸುವುದನ್ನು ಪರಿಶೀಲಿಸುವಂತೆ ಕೇಂದ್ರಕ್ಕೆ ಸೂಚಿಸಿದೆ.

 ನಿಧಿ ಬಳಕೆಯಲ್ಲಿ ಮಂದಗತಿಗಾಗಿಯೂ ಸಿಬಿಐನ್ನು ತರಾಟೆಗೆತ್ತಿಕೊಂಡಿರುವ ಬಿಜೆಪಿ ಸಂಸದ ಭೂಪೇಂದ್ರ ಯಾದವ್ ನೇತೃತ್ವದ ಸಂಸದೀಯ ಸಮಿತಿಯು ನಿಧಿ ಬಳಕೆಯಲ್ಲಿ ಅಡೆತಡೆಗಳನ್ನು ಗುರುತಿಸಲು ಮತ್ತು ಯೋಜನೆಗಳು ದೀರ್ಘ ಕಾಲ ಬಾಕಿಯುಳಿಯದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News