ಅಫ್ಘಾನಿಸ್ತಾನದಲ್ಲಿ ಭಾರತ ಯಾಕಿಲ್ಲ?: ಟ್ರಂಪ್ ಪ್ರಶ್ನೆ

Update: 2019-01-03 16:46 GMT

ವಾಶಿಂಗ್ಟನ್, ಜ. 3: ಅಫ್ಘಾನಿಸ್ತಾನದ ಪುನರ್ನಿರ್ಮಾಣದಲ್ಲಿ ಭಾರತದ ಕೊಡುಗೆಯನ್ನು ಬುಧವಾರ ನಡೆದ ಅಮೆರಿಕ ಸಚಿವ ಸಂಪುಟ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದಾರೆ ಹಾಗೂ ಅಫ್ಘಾನಿಸ್ತಾನಕ್ಕೆ ಭಾರತ ಸೇನೆ ಕಳುಹಿಸಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಇದು ಅವರ ಆಡಳಿತದ ದಕ್ಷಿಣ ಏಶ್ಯ ನೀತಿಗೆ ವಿರುದ್ಧವಾಗಿದೆ.

‘‘ಅಫ್ಘಾನಿಸ್ತಾನದಲ್ಲಿ ರಶ್ಯ ಯಾಕಿಲ್ಲ?, ಅಲ್ಲಿ ಭಾರತ ಯಾಕಿಲ್ಲ?, ಅಲ್ಲಿ ಪಾಕಿಸ್ತಾನ ಯಾಕಿಲ್ಲ?’’, ಎಂದು ಅಧ್ಯಕ್ಷರು ಭಾವಾವೇಶದಿಂದ ಪ್ರಶ್ನಿಸಿದರು. ಅಮೆರಿಕವು ಬೇರೆಯವರಿಗಾಗಿ ಯುದ್ಧಗಳನ್ನು ಮಾಡುತ್ತಿದೆ ಎಂಬ ತನ್ನ ವಾದಕ್ಕೆ ಪೂರಕವಾಗಿ ಅವರು ಈ ಪ್ರಶ್ನೆಗಳನ್ನು ಎತ್ತಿದರು.

‘‘ನಾವು ಯಾಕೆ ಅಲ್ಲಿದ್ದೇವೆ? ನಾವು ಅಲ್ಲಿಂದ 6,000 ಮೈಲು ದೂರದಲ್ಲಿದ್ದೇವೆ’’ ಎಂದರು.

ಅವರ ಈ ಹೇಳಿಕೆಗಳು ‘ವಿಚಿತ್ರವಾಗಿವೆ’, ‘ಅಸಂಬದ್ಧವಾಗಿವೆ’ ಹಾಗೂ ‘ಚೆನ್ನಾಗಿ ಯೋಚಿಸಿ ನೀಡಿದ ಹೇಳಿಕೆಗಳಲ್ಲ’ ಎಂಬುದಾಗಿ ಹಲವಾರು ದಕ್ಷಿಣ ಏಶ್ಯ ರಾಜತಾಂತ್ರಿಕರು ಮತ್ತು ಪರಿಣತರು ಹೇಳಿದ್ದಾರೆ.

2001 ಸೆಪ್ಟಂಬರ್ 11ರಂದು ಅಮೆರಿಕದ ಮೇಲೆ ಅಲ್-ಖಾಯಿದ ಭಯೋತ್ಪಾದಕ ಸಂಘಟನೆ ನಡೆಸಿದ ಸರಣಿ ದಾಳಿಯ ಬಳಿಕ, ಅಮೆರಿಕ ಅಫ್ಘಾನಿಸ್ತಾನದ ವಿರುದ್ಧ ಯುದ್ಧ ಸಾರಿತು. ಅಲ್-ಖಾಯಿದ ಮುಖ್ಯಸ್ಥ ಒಸಾಮ ಬಿನ್ ಲಾದನ್‌ಗೆ ಅಫ್ಘಾನಿಸ್ತಾನದ ತಾಲಿಬಾನ್ ಸರಕಾರ ಆಶ್ರಯ ನೀಡಿತ್ತು. ಅಮೆರಿಕ ಸೇನೆಯು ಈಗಲೂ ತಾಲಿಬಾನ್ ವಿರುದ್ಧ ಆ ದೇಶದಲ್ಲಿ ಹೋರಾಡುತ್ತಿದೆ. ಅಮೆರಿಕದ ಸಮರ ಈಗ 18ನೇ ವರ್ಷದಲ್ಲಿದ್ದು, ಇತಿಹಾಸದ ಅತ್ಯಂತ ದೊಡ್ಡ ಯುದ್ಧವಾಗಿ ಮಾರ್ಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News