×
Ad

ಮೂಡುಬಿದಿರೆ : ಕಲೆಯ ನೆಲೆಗೆ ಸಾಕ್ಷಿಯಾಗಲಿದೆ ಆಳ್ವಾಸ್ ವಿರಾಸತ್

Update: 2019-01-03 22:18 IST

ಮೂಡುಬಿದಿರೆ, ಜ. 3: ದೇಶಿಯ ಪರಂಪರೆಗೆ ವಿಶೇಷ ಮಹತ್ವ ನೀಡಿ, ವಿನೂತನ ಪ್ರಯೋಗಗಳಿಗೆ ಹೆಸರಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕಳೆದ 24 ವರ್ಷದಿಂದ ನಿರಂತರವಾಗಿ `ಆಳ್ವಾಸ್ ವಿರಾಸತ್' ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಮೂಲಕ ಸಹಸ್ರಾರು ಕಲಾ ಕೋವಿದರಿಗೆ ವೇದಿಕೆಯನ್ನು ಮಾತ್ರ ವಲ್ಲದೆ ಲಕ್ಷಾಂತರ ಪ್ರೇಕ್ಷಕರಿಗೆ ದೇಶಿಯ ಸಂಸ್ಕೃತಿಯನ್ನು ಪರಿಚಯಿಸುತ್ತಿದ್ದು ಇಂದಿನಿಂದ 25ನೇ ವರ್ಷದ ಆಳ್ವಾಸ್ ವಿರಾಸತ್ ಪ್ರಾರಂಭವಾಗಲಿದ್ದು ಮೂಡುಬಿದಿರೆ ಪುತ್ತಿಗೆ ಪದವಿನ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆ ಕಲೆಯ ನೆಲೆಗೆ ಸಾಕ್ಷಿಯಾಗಲಿದೆ.

24 ವರ್ಷಗಳ ಹಿಂದೆ ಮೂಡುಬಿದಿರೆಯ ಸಮಾಜಮಂದಿರದಲ್ಲಿ ಮೊದಲ ಬಾರಿ ಆಯೋಜನೆಯಾದ  500 ಮಂದಿ ಪ್ರೇಕ್ಷಕರ ಸಮ್ಮುಖದಲ್ಲಿ ಪ್ರಾರಂಭವಾದ ವಿರಾಸತ್ ತನ್ನ 25ನೇ ವರ್ಷದ ಹೊಸ್ತಿಲಿನಲ್ಲಿ 50 ಸಾವಿರಕ್ಕೂ ಅಧಿಕ ಪ್ರೇಕ್ಷಕರನ್ನು ಹಿಡಿದಿಡುತ್ತಿದೆ. ವೇದಿಕೆಗಳ ರೂಪು-ಶೃಂಗಾರ, ಕಲಾವಿದರ ಆಯ್ಕೆ, ಪ್ರೇಕ್ಷಕರನ್ನು ಆಕರ್ಷಿಸುವ ಪ್ರಯೋಗ ಆಳ್ವಾಸ್ ವಿರಾಸತ್ ಅನ್ನು ಮಾದರಿ ಸಮ್ಮೇಳವನ್ನಾಗಿಸಿದೆ.

ವ್ಯವಸ್ಥಿತ, ಶಿಸ್ತುಬದ್ಧ ಆಯೋಜನೆಯಿಂದಾಗಿ ಸೆಲೆಬ್ರೆಟಿ, ಯುವ ಕಲಾವಿದರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರೇಕ್ಷಕರು ರಸಭಂಗವಾಗದ ರೀತಿಯಲ್ಲಿ ನೋಡಲು ಅವಕಾಶವಿರುವುದರಿಂದ ಪ್ರತಿ ವರ್ಷದ ವಿರಾಸತ್‍ಗೆ ಬರುವ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಮೂರು ದಿನ ಲಕ್ಷಾಂತರ ಪ್ರೇಕ್ಷಕರು ಆಳ್ವಾಸ್ ವಿರಾಸತ್‍ನ ಸೊಬಗನ್ನು ಕಣ್ಮನ ತುಂಬಿಸಿಕೊಳ್ಳುತ್ತಿದ್ದಾರೆ. ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಅಮೇರಿಕಾ ಮೊದಲಾದ ದೇಶಗಳಿಂದಲೂ ಪ್ರತಿವರ್ಷ ವಿರಾಸತ್ ನೋಡಲೆಂದೇ ಮೂಡುಬಿದಿರೆಗೆ ಬರುತ್ತಾರೆ. 

ಸೆಲೆಬ್ರೆಟಿ ಕಲಾವಿದರ ಗೌಜಿ ಗಮ್ಮತ್ತು

ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿರುವ ದೇಶದ ನೃತ್ಯ, ಸಂಗೀತ ಸೆಲೆಬ್ರೆಟಿ ಕಲಾವಿದರನ್ನು ಮೂಡುಬಿದಿರೆ ಜನರು ಯಾವುದೇ ರೀತಿಯ ಶುಲ್ಕ ಪಡೆಯದೇ ನೋಡಿ ಅವರ ಪ್ರತಿಭೆಯನ್ನು ಅಸ್ವಾಧಿಸುವಂತೆ ಮಾಡಿರುವ ಹೆಗ್ಗಳಿಕೆ ಆಳ್ವಾಸ್ ವಿರಾಸತ್ ಉತ್ಸವದ್ದು. ಪದ್ಮಾ ಸುಬ್ರಹ್ಮಣ್ಯಂ. ಚಿತ್ರಾ ವಿಶ್ವೇಶ್ವರನ್, ಸ್ವಪ್ನ ಸುಂದರಿ, ವಸುಂಧರ ದೊರೆಸ್ವಾಮಿ, ಶ್ರೀಧರ್ ದಂಪತಿ, ಬಿಜು ಸತ್ಪತಿ, ಶೀಲಾ ಉನ್ನಿಕೃಷ್ಣನ್, ಝಾಕೀರ್ ಹುಸೇನ್, ಜೇಸುದಾಸ್, ಎಸ್‍ಪಿ ಬಾಲಸುಬ್ರಹ್ಮಣ್ಯಂ, ಮೈಸೂರು ಮಂಜುನಾಥ್, ನಿರುಪಮಾ ರಾಜೇಂದ್ರ, ಪ್ರವೀಣ್ ಗೋಡ್ಖಿಂಡಿ, ಬಾಲಮುರಳಿ ಕೃಷ್ಣ, ಶಿವಮಣಿ, ಬಾಲಭಾಸ್ಕರ್, ಶಂಕರ ಮಹಾದೇವನ್, ವಿಜಯ ಪ್ರಕಾಶ್, ಮಲೇಶಿಯಾದ ಇಬ್ರಾಹಿಂ ಸಹಿತ ಸಹಸ್ರಾರು ಕಲಾವಿದರು ವಿರಾಸತ್ ವೇದಿಕೆಯಲ್ಲಿ ತಮ್ಮ ಕಲಾ ಪ್ರಕಾರ ಗಳನ್ನು ಪ್ರಸ್ತುತಪಡಿಸಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 350 ಮಂದಿ ವಿದ್ಯಾರ್ಥಿ ಕಲಾವಿದರು ದೇಶಿ ಸಂಸ್ಕøತಿಯನ್ನು ಅಷ್ಟೇ ನಾಜೂಕಾಗಿ ವಿರಾಸತ್‍ನಲ್ಲಿ ಪ್ರದರ್ಶಿಸುತ್ತಿರುವುದು ಮತ್ತೊಂದು ವಿಶೇಷ.

ಹೊಸತನದ ಹೊಸ್ತಿಲಲ್ಲಿ ವಿದ್ಯಾಕಾಶಿ

ಮೂಡುಬಿದಿರೆ ಜೈನಕಾಶಿಯ ಪುತ್ತಿಗೆಪದವಿನಲ್ಲಿ ಇಂದಿನಿಂದ ಜ.6ರವರೆಗೆ ನಡೆಯಲಿರುವ ಆಳ್ವಾಸ್ ವಿರಾಸತ್‍ಗೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಆಳ್ವಾಸ್ ಸಾಂಪ್ರದಾಯಿಕ ಶೃಂಗಾರದೊಂದಿಗೆ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆ ಶೃಂಗಾರಗೊಳುತ್ತಿದೆ. ಈ ಬಾರಿ ವಿರಾಸತ್‍ನಲ್ಲಿ ಆಳ್ವಾಸ್ ವಿರಾಸತ್ ಉತ್ಸವದಲ್ಲಿ ಹರಿಹರನ್, ಲೆಸ್ಲೆ ಲಿವಿಸ್ ಬಳಗದ ರಸ ಸಂಯೋಗ, ಸುಖ್ವಿಂದರ್ ಸಿಂಗ್ ಬಳಗದ ಗಾನ ತರಂಗ, ಒಡಿಸ್ಸಿ ನೃತ್ಯ, ಕೂಚುಪುಡಿ ನೃತ್ಯ, ಶಂಕರ್ ಮಹಾದೇವನ್ ಬಳಗದ ಚಿತ್ರ ರಸಸಂಜೆ, ಕೊಲ್ಕತ್ತದ ಭರತನಾಟ್ಯ ಮಾತ್ರವಲ್ಲ  ಆಳ್ವಾಸ್ ತಂಡಗಳಿಂದ ಮೋಹಿನಿಯಾಟ್ಟಂ, ಭರತನಾಟ್ಯ, ಕಥಕ್, ಮಣಿಪುರಿ ದೋಲ್ ಚಲಂ, ಸ್ಟಿಕ್ ಡ್ಯಾನ್ಸ್, ಬಾಂಗ್ಡಾ, ಮಲ್ಲಕಂಬ, ದಾಂಡಿಯಾ, ಬಂಜಾರ, ಯಕ್ಷಗಾನ, ಶ್ರೀಲಂಕನ್ ಕ್ಯಾಂಡಿಯನ್ ಡ್ಯಾನ್ಸ್ ಸಂಯೋಜಿಸಲಾಗಿದೆ. ಈ ಬಾರಿಯ ಆಳ್ವಾಸ್ ವಿರಾಸತ್ ಕಲಾ ಲೋಕವನ್ನು ಪ್ರೇಕ್ಷಕರ ಮುಂದೆ ತಂದಿರಿಸಲಿದೆ. ಕಲಾ ಲೋಕಕ್ಕೆ ಹೊಸ ಭಾಷ್ಯ ಬರೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News