ಕೆಲವರು ನನ್ನ ಜಾತಿಯನ್ನು ಆಗಾಗ್ಗೆ ನೆನಪಿಸುತ್ತಾರೆ

Update: 2019-01-03 17:05 GMT

ತಿರುವನಂತಪುರ,ಜ.3: ತನ್ನ ಜಾತಿಯ ಬಗ್ಗೆ ಮಾತನಾಡುವುದನ್ನು ಜನರು ಮುಂದುವರಿಸಿದ್ದಾರೆ ಎಂದು ಈಳವ ಸಮುದಾಯಕ್ಕೆ ಸೇರಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ ಇಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,‘‘ಕೆಲವರು ನನ್ನ ಜಾತಿಯನ್ನು ಆಗಾಗ್ಗೆ ನೆನಪಿಸುತ್ತಿರುತ್ತಾರೆ. ನಾನು ಮೂರ್ತೆದಾರ(ತೆಂಗಿನ ಮರದಿಂದ ನೀರಾ ಇಳಿಸುವ ವೃತ್ತಿ)ನ ಮಗನಾಗಿದ್ದೇನೆ. ವಿಜಯನ್ ಕೂಡ ಮೂರ್ತೆದಾರನಾಗಬೇಕು ಎನ್ನುವುದು ಅವರ ಬಯಕೆಯಾಗಿದೆ’’ ಎಂದರು. ಈಳವ ಸಮುದಾಯವು ಇತರ ಹಿಂದುಳಿದ ವರ್ಗಗಳಿಗೆ ಸೇರಿದ್ದು,ಕೇರಳದ ಜನಸಂಖ್ಯೆಯಲ್ಲಿ ಶೇ.28ರಷ್ಟು ಪಾಲನ್ನು ಹೊಂದಿದೆ.

ಕೇರಳ ಬಿಜೆಪಿ ಘಟಕದ ಮುಖವಾಣಿಯಾಗಿರುವ ‘ಜನ್ಮಭೂಮಿ’ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ವ್ಯಂಗ್ಯಚಿತ್ರಕ್ಕೆ ಪ್ರತಿಕ್ರಿಯೆಯಾಗಿ ವಿಜಯನ್ ಈ ಹೇಳಿಕೆಯನ್ನು ನೀಡಿದರು. ಕಳೆದ ತಿಂಗಳು ಅದು ತನ್ನ ಮುಖಪುಟದಲ್ಲಿ ಪ್ರಕಟಿಸಿದ್ದ ದೈನಂದಿನ ವ್ಯಂಗ್ಯಚಿತ್ರದಲ್ಲಿ ಶಬರಿಮಲೆ ವಿಷಯದಲ್ಲಿ ಮಹಿಳಾ ಗೋಡೆಯನ್ನು ನಿರ್ಮಿಸುವ ಯೋಜನೆಗಾಗಿ ವಿಜಯನ್ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡನೆಯ ಬಗ್ಗೆ ಇಬ್ಬರು ವ್ಯಕ್ತಿಗಳು ಚರ್ಚಿಸುತ್ತಿದ್ದನ್ನು ತೋರಿಸಲಾಗಿತ್ತು. ವ್ಯಂಗ್ಯಚಿತ್ರಕ್ಕ್ಕೆ ‘‘ತೆಂಗಿನ ಮರವನ್ನು ಹತ್ತಬೇಕಿದ್ದ ವ್ಯಕ್ತಿಗೆ ವ್ಯಕ್ತಿಗೆ ಅಧಿಕಾರ ನೀಡಿದರೆ ಇದೇ ಆಗುತ್ತದೆ ’’ ಎಂಬ ಅಡಿಬರಹವನ್ನು ನೀಡಲಾಗಿತ್ತು. ತೆಂಗಿನಮರಗಳಿಂದ ನೀರಾವನ್ನು ಇಳಿಸುವುದು ಈಳವ ಸಮುದಾಯದ ಸಾಂಪ್ರದಾಯಿಕ ವೃತ್ತಿಯಾಗಿದೆ. ವಿಜಯನ್ ತಂದೆ ಇದೇ ವೃತ್ತಿಯನ್ನು ನಡೆಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News