×
Ad

ಕೇಂದ್ರ, ರಾಜ್ಯ ಸಚಿವರ ಗಮನಕ್ಕೆ ತರುವ ಪ್ರಯತ್ನ: ಪೇಜಾವರ ಶ್ರೀ

Update: 2019-01-03 23:07 IST

ಮಲ್ಪೆ, ಜ.3: ಬೋಟು ಸಹಿತ ನಾಪತ್ತೆಯಾಗಿರುವ ಏಳು ಮಂದಿ ಮೀನು ಗಾರರನ್ನು ಶೀಘ್ರವೇ ಪತ್ತೆ ಹಚ್ಚುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಕೇಂದ್ರ ಸಚಿವರು ಸೇರಿದಂತೆ ಸಂಬಂಧಪಟ್ಟವರಿಗೆ ತಿಳಿಸುವ ಪ್ರಯತ್ನ ಮಾಡ ಲಾಗು ವುದು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅದಕ್ಕಾಗಿ ಒತ್ತಾಯ ಮಾಡಲಾಗುವುದು ಎಂದು ಪೇಜಾ ವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟು ಸಹಿತ ಏಳು ಮಂದಿ ಮೀನುಗಾರರು ಕಳೆದ 20 ದಿನಗಳಿಂದ ಕಣ್ಮರೆಯಾಗಿರುವ ಹಿನ್ನೆಲೆಯಲ್ಲಿ ಗುರು ವಾರ ಮಲ್ಪೆ ಬಂದರಿಗೆ ಭೇಟಿ ನೀಡಿ ಮೀನುಗಾರರನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಮೊಗವೀರ ಸಮುದಾಯ ಹಾಗೂ ಅಷ್ಟಮಠಗಳಿಗೆ ನಿಕಟ ಸಂಪರ್ಕ ಇದೆ. ಶ್ರೀಕೃಷ್ಣ ಮಠಕ್ಕೆ ಎಲ್ಲ ರೀತಿಯ ಸಹಕಾರ ಹಾಗೂ ಬೆಂಬಲ ನೀಡುವ ಮೊಗ ವೀರರು ಸೈನಿಕರಿದ್ದಂತೆ. ಏಳು ಮಂದಿ ಮೀನುಗಾರರ ನಾಪತ್ತೆಯಾಗಿರುವ ವಿಚಾರ ತಿಳಿದು ಆಘಾತವಾಯಿತು ಎಂದು ಸ್ವಾಮೀಜಿ ತಿಳಿಸಿದರು. ರಾಮನಿಗೆ ಬೈಯ್ಯುವ ವ್ಯಕ್ತಿಯ ರಕ್ಷಣೆಗೆ ಲಕ್ಷಾಂತರ ರೂ. ಖರ್ಚು ಮಾಡಿ ಅವರ ಬಗ್ಗೆ ಮುತುವರ್ಜಿ ವಹಿಸುವ ಸರಕಾರ, ಸಾಹಸಿಗರಾಗಿ ಕೆಲಸ ಮಾಡುವ ಹಾಗೂ ದೇಶದ ಉತ್ಪಾದನೆಯಲ್ಲಿ ಭಾಗಿಗಳಾಗಿರುವ ಮೊಗವೀರರ ಬಗ್ಗೆ ಅಸಡ್ಡೆ ಹಾಗೂ ಅಲಕ್ಷ ತೋರಿಸುತ್ತಿರುವುದು ಸರಿಯಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.

ನಾಗರಿಕರ ರಕ್ಷಣೆ ಸರಕಾರದ ಕರ್ತವ್ಯವಾಗಿದೆ. ನಾಪತ್ತೆಯಾಗಿರುವ ಮೀನು ಗಾರರ ಪತ್ತೆ ಕಾರ್ಯದಲ್ಲಿ ಇಡೀ ಸಮುದಾಯ ಆತಂಕಕ್ಕೆ ಒಳಗಾಗಿದೆ. ನಿಮ್ಮ ಜೊತೆ ನಾವು ಇದ್ದೇವೆ. ನನ್ನಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಹೋರಾಟದಲ್ಲಿ ಸದಾ ನಿಮ್ಮ ಜೊತೆ ಇರುತ್ತೇನೆ. ನಾಪತ್ತೆಯಾಗಿರುವ ಏಳು ಮಂದಿ ಕೂಡ ನಮಗೆ ಶೀಘ್ರವೇ ಸುರಕ್ಷಿತವಾಗಿ ದೊರೆಯಬೇಕು. ಅಲ್ಲಿಯ ವರೆಗೆ ನಮಗೆ ಸಮಾಧಾನ ಇರುವುದಿಲ್ಲ ಎಂದು ಅವರು ಹೇಳಿದರು.

ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ನಿಮ್ಮ ಸೂಚನೆಯಂತೆ ನಾನು ನಿಮ್ಮ ಜೊತೆ ಇರುತ್ತೇನೆ. ನಾಪತ್ತೆಯಾಗಿರುವವರು ಸುರಕ್ಷಿತವಾಗಿ ಸಿಗಲಿ ಎಂಬುದಾಗಿ ಪ್ರತಿದಿನ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಎಲ್ಲ ವಿಚಾರ ದಲ್ಲೂ ಪೂರ್ಣ ಸಹಕಾರ ನೀಡಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಮಾತನಾಡಿ, ಪೇಜಾವರ ಶ್ರೀ ಮನಸ್ಸು ಮಾಡಿದರೆ ಕೇಂದ್ರ ಸರಕಾರ ಚುರುಕಾಗಿ ಕೆಲಸ ನಿರ್ವಹಿಸಿ ಮೀನುಗಾರರನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಆದುದರಿಂದ ಸ್ವಾಮೀಜಿ ಈ ವಿಚಾರವನ್ನು ಪ್ರಧಾನ ಮಂತ್ರಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರ ಗಮನಕ್ಕೆ ತಂದು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಿ ಏಳು ಮಂದಿ ಮೀನುಗಾರರನ್ನು ಶೀಘ್ರದಲ್ಲೇ ಪತ್ತೆ ಹಚ್ಚುವಂತೆ ಮಾಡ ಬೇಕು ಎಂದು ಮನವಿ ಮಾಡಿದರು.

ಈ ವಿಚಾರವನ್ನು ಸ್ವಾಮೀಜಿಗೆ ತಿಳಿಸುವಾಗ ವ್ಯತ್ಯಾಸಗಳಾಗಿವೆ. ಸ್ವಾಮೀಜಿ ಬಗ್ಗೆ ವಾಟ್ಸಾಪ್‌ನಲ್ಲಿ ಯಾರೋ ಯುವಕರು ಸುದ್ದಿಗಳನ್ನು ಹರಿದುಬಿಟ್ಟಿರ ಬಹುದು. ಆದರೆ ನಾವು ಎಂದಿಗೂ ಪೇಜಾವರ ಸ್ವಾಮೀಜಿ ಜೊತೆ ಇರುತ್ತೇವೆ. ಅವರು ಕೂಡ ನಮ್ಮ ಜೊತೆಗೆ ಇರುತ್ತಾರೆ. ನಮಗೂ ಅವರಿಗೂ ಅವಿನಾಭವ ಸಂಬಂಧ ಇದೆ ಎಂದ ಅವರು, ಜ.6ರಂದು ನಡೆಸಲು ಉದ್ದೇಶಿಸಿರುವ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟದಲ್ಲಿ ಸ್ವಾಮೀಜಿ ಭಾಗಿಯಾಗಿ ಬೆಂಬಲ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಹಿರಿಯಣ್ಣ ಟಿ.ಕಿದಿಯೂರು, ಕಾರ್ಯದರ್ಶಿ ಗೋಪಾಲ ಆರ್.ಕೆ. ಉಪಸ್ಥಿತರಿದ್ದರು.

‘ಗೊತ್ತಿದ್ದರೆ ರಾಷ್ಟ್ರಪತಿ ಗಮನಕ್ಕೆ ತರುತ್ತಿದ್ದೆ’

ಮೀನುಗಾರರು ನಾಪತ್ತೆಯಾಗಿರುವ ವಿಚಾರ ಮೊದಲೇ ಗೊತ್ತಿದ್ದರೆ ರಾಷ್ಟ್ರಪತಿ ಉಡುಪಿಗೆ ಬಂದಾಗ ಅವರಲ್ಲಿ ಈ ವಿಚಾರ ಪ್ರಸ್ತಾಪಿಸಿ ಈ ಬಗ್ಗೆ ಗಮನ ಕೊಡುವಂತೆ ಮನವಿ ಮಾಡುತ್ತಿದ್ದೆ. ಆದರೆ ನನಗೆ ಆ ವಿಚಾರ ಗೊತ್ತೇ ಇರಲಿಲ್ಲ. ಎರಡು ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಬಂದ ಸಂದೇಶವನ್ನು ನೋಡಿ ಈ ವಿಚಾರ ತಿಳಿದುಕೊಂಡಿದ್ದೇನೆ ಎಂದು ಪೇಜಾವರ ಶ್ರೀ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News