ಮೀನುಗಾರಿಕೆ ವೇಳೆ ನಾಪತ್ತೆಯಾಗಿರುವ ಮೊಗವೀರರಿಗಾಗಿ ಮಲ್ಪೆ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ

Update: 2019-01-04 10:21 GMT

ಮಲ್ಪೆ, ಜ.4: ಕಳೆದ 20 ದಿನಗಳಿಂದ ನಾಪತ್ತೆಯಾಗಿರುವ 8 ಮಂದಿ ಮೀನುಗಾರರು ಸುರಕ್ಷಿತವಾಗಿ ಹಿಂದಿರುಗಲು ಮಲ್ಪೆಯ ಸಯ್ಯದೀನ್ ಅಬೂಬಕರ್ ಸಿದ್ದೀಕ್ ಜಾಮಿಯಾ ಮಸೀದಿಯಲ್ಲಿ ಶುಕ್ರವಾರ ಜುಮಾ ನಮಾಝಿನ ಖುತ್ಬಾದಲ್ಲಿ ವಿಶೇಷವಾಗಿ ಪ್ರಾರ್ಥನೆ ಮಾಡಲಾಯಿತು.

ಮಸೀದಿಯ ಇಮಾಮ್ ಮೌಲಾನ ಇಮ್ರಾನುಲ್ಲಾ ಖಾನ್ ಮನ್ಸೂರಿ ‘ಮಾನವೀಯ ಹಕ್ಕುಗಳು’ ಎಂಬ ವಿಷಯದ ಕುರಿತ ಖುತ್ಬಾ ಪ್ರವಚನದಲ್ಲಿ ಮೀನುಗಾರಿಕೆ ತೆರಳಿದ್ದ ವೇಳೆ ನಾಪತ್ತೆಯಾಗಿರುವ ಎಲ್ಲ ಮೀನುಗಾರರು ಸುರಕ್ಷಿತವಾಗಿ ಮನೆ ಸೇರಲು ಪ್ರಾರ್ಥನೆ ಮಾಡಿದರು.

“ಮಾನವರೆಲ್ಲರು ಪರಸ್ಪರ ಸಹೋದರರು, ನಾವು ಪರಸ್ಪರ ಸುಖ-ಕಷ್ಟ ಹಂಚಿಕೊಂಡು ಬಾಳಬೇಕು” ಎಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು. ಮೀನುಗಾರರ ಪತ್ತೆಗೆ ಆಗ್ರಹಿಸಿ ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ಜ.6ರಂದು ನಡೆಯುವ ಪ್ರತಿಭಟನೆಯಲ್ಲಿ ಮುಸ್ಲಿಮರು ಭಾಗವಹಿಸುವಂತೆ ಇಮಾಮ್ ಕರೆ ನೀಡಿದರು.

“ನಾಪತ್ತೆಯಾಗಿರುವ ಮೀನುಗಾರರ ಮನೆಯವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ. ನಾಪತ್ತೆಯಾಗಿರುವ ಮೀನುಗಾರರು ಆದಷ್ಟು ಬೇಗ ನಮ್ಮೊಂದಿಗೆ ಸೇರಿಕೊಳ್ಳಲಿ” ಎಂದು ಅವರು ವಿಶೇಷವಾಗಿ ಪ್ರಾರ್ಥಿಸಿದರು.

“ಮಾನವೀಯ ನೆಲೆಯಲ್ಲಿ ಪರಸ್ಪರ ಸ್ಪಂದಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಮಸೀದಿಯ ಶುಕ್ರವಾರದ ಖುತ್ಬಾದಲ್ಲಿ ಮೀನುಗಾರ ಸಹೋದರರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಅಲ್ಲದೆ ಜ.6ರಂದು ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮುಸ್ಲಿಮರಿಗೆ ಕರೆ ನೀಡಲಾಗಿದೆ” ಎಂದು ಮಸೀದಿಯ ಕಾರ್ಯದರ್ಶಿ ಫಯಾಝ್ ಅಹ್ಮದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News