ಮೀನುಗಾರರ ಹೋರಾಟಕ್ಕೆ ಸಿಐಟಿಯು ಬೆಂಬಲ
Update: 2019-01-04 18:01 IST
ಉಡುಪಿ, ಜ.4: ಮೀನುಗಾರರು ಬೋಟು ಸಹಿತ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ಮೀನುಗಾರರ ವಿವಿಧ ಸಂಘಟನೆಗಳು ಕರೆ ನೀಡಿರುವ ಜ.6ರ ರಾಷ್ಟ್ರೀಯ ಹೆದ್ದಾರಿ ಹಾಗೂ ಮೀನುಗಾರಿಕೆ ಬಂದ್‌ಗೆ ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಬೋಟ್ ಕಾಣೆಯಾಗಿ 20ದಿನ ಕಳೆದಿದೆ. ಹುಡುಕುವ ಪ್ರಯತ್ನ ಸಾಕಾಗಿಲ್ಲ. ಕೇಂದ್ರ ಸರಕಾರದ ಅಧೀನದಲ್ಲಿರುವ ನಾವಿಕ ಮತ್ತು ವೈಮಾನಿಕ ಪಡೆಯನ್ನು ಬಳಸಿ ಹುಡುಕಲು ಸಾಧ್ಯವಾಗಬೇಕು. ಇದರಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಗಡಿ ಪ್ರಶ್ನೆಗಳು ಇರುವುದರಿಂದ ಕೇಂದ್ರ ಸರಕಾರದ ಹೆಚ್ಚಿನ ಮುತುವರ್ಜಿ ಅಗತ್ಯ. ಉಡುಪಿಯಿಂದ ಆಯ್ಕೆಯಾಗಿರುವ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಈ ಕುರಿತು ಕೂಡಲೇ ಗಮನ ಹರಿಸಬೇಕೆಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕೆ.ಶಂಕರ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.