ಶೋಧ ಸಮಿತಿಯ ರಚನೆಗೆ ಕೈಗೊಂಡ ಕ್ರಮಗಳನ್ನು ತಿಳಿಸಿ: ಕೇಂದ್ರಕ್ಕೆ ಸುಪ್ರೀಂ ಆದೇಶ
ಹೊಸದಿಲ್ಲಿ,ಜ.4: ಲೋಕಪಾಲರ ನೇಮಕಕ್ಕೆ ಶೋಧ ಸಮಿತಿಯನ್ನು ರಚಿಸಲು ಸೆಪ್ಟೆಂಬರ್ ನಿಂದೀಚಿಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿ ಜ.17ರೊಳಗೆ ಅಫಿದಾವತ್ತನ್ನು ತನಗೆ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಕೇಂದ್ರ ಸರಕಾರಕ್ಕೆ ಆದೇಶಿಸಿದೆ. ಲೋಕಪಾಲ ಹುದ್ದೆಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನು ಈ ಸಮಿತಿಯು ಶಿಫಾರಸು ಮಾಡಲಿದೆ.
2018,ಸೆಪ್ಟೆಂಬರ್‌ನಿಂದೀಚಿಗೆ ಸಮಿತಿಯನ್ನು ರಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಅವರು ತಿಳಿಸಿದಾಗ,ಈವರೆಗೆ ನೀವು ಮಾಡಿರುವುದಾದರೂ ಏನು ಎಂದು ಪ್ರಶ್ನಿಸಿದ ಪೀಠವು,ಇಷ್ಟೊಂದು ಸಮಯವನ್ನು ತೆಗೆದುಕೊಂಡಿದ್ದೀರಿ, ನೀವು ಕೈಗೊಂಡಿರುವ ಪ್ರತಿಯೊಂದೂ ಕ್ರಮದ ವಿವರಗಳನ್ನು ದಾಖಲೆಯ ರೂಪದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ನಿರ್ದೇಶ ನೀಡಿತು. ನ್ಯಾಯವಾದಿ ಪ್ರಶಾಂತ ಭೂಷಣ್ ಅವರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿದೆ.
ಶೋಧ ಸಮಿತಿಯ ಸದಸ್ಯರ ಹೆಸರುಗಳನ್ನು ಸಹ ಕೇಂದ್ರವು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿಲ್ಲ ಎಂದು ಭೂಷಣ್ ನ್ಯಾಯಾಲಯಕ್ಕೆ ತಿಳಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಲೋಕಪಾಲರನ್ನು ನೇಮಕಗೊಳಿಸುವಲ್ಲಿ ಸರಕಾರವು ವಿಫಲವಾಗಿರುವುದರಿಂದ ನ್ಯಾಯಾಲಯವೇ ಲೋಕಪಾಲರನ್ನು ನೇಮಕಗೊಳಿಸಬೇಕು ಎಂದು ಎನ್‌ಜಿಒ ಕಾಮನ್ ಕಾಸ್ ಅನ್ನು ಪ್ರತಿನಿಧಿಸುತ್ತಿರುವ ಭೂಷಣ್ ಈ ಹಿಂದೆ ಪೀಠವನ್ನು ಕೋರಿದ್ದರು. ಕೇಂದ್ರವು ಕಳೆದ ಸೆಪ್ಟೆಂಬರ್‌ನಲ್ಲಿ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶೆ ರಂಜನಾ ಪ್ರಕಾಶ ದೇಸಾಯಿ ಅವರ ನೇತೃತ್ವದಲ್ಲಿ ಎಂಟು ಸದಸ್ಯರ ಶೋಧ ಸಮಿತಿಯನ್ನು ರಚಿಸಿತ್ತು.