×
Ad

ಹಿಂದೂ ಧಾರ್ಮಿಕ ವಿಷಯದ ಕುರಿತು ನಿರ್ಧರಿಸಲು ನ್ಯಾಯಾಲಯ, ಜಾತ್ಯತೀತ ಸರಕಾರಕ್ಕೆ ಅಧಿಕಾರವಿಲ್ಲ: ಪೇಜಾವರ ಶ್ರೀ

Update: 2019-01-04 19:50 IST

ಉಡುಪಿ, ಜ. 4: ಹಿಂದೂ ಧಾರ್ಮಿಕ ವಿಷಯಗಳಲ್ಲಿ, ಸಂಪ್ರದಾಯದ ವಿಷಯಗಳಲ್ಲಿ ನ್ಯಾಯಾಲಯಕ್ಕಾಗಲೀ, ಜಾತ್ಯತೀತ ಸರಕಾರಕ್ಕಾಗಲೀ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವಿಲ್ಲ. ಹಿಂದೂ ಧಾರ್ಮಿಕ ಮುಖಂಡರು ಹಾಗೂ ಹಿಂದೂ ಜನತೆ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಹೇಳಿದ್ದಾರೆ.

ಉಡುಪಿ ರಥಬೀದಿಯಲ್ಲಿರುವ ಪೇಜಾವರ ಮಠದಲ್ಲಿ ಕರೆದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಈ ವಿಷಯ ತಿಳಿಸಿದ ಸ್ವಾಮೀಜಿ, ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಿಸಿದ ಕುರಿತಂತೆ ನಾನು ನೀಡಿದ ಹೇಳಿಕೆ ಕೆಲವರಿಗೆ ಗೊಂದಲವನ್ನುಂಟು ಮಾಡಿದೆ. ಇದಕ್ಕಾಗಿ ನನ್ನ ಅಭಿಪ್ರಾಯವನ್ನು ಸ್ಪಷ್ಟಪಡಿಸುತಿದ್ದೇನೆ ಎಂದರು.

ಶಬರಿಮಲೆ ಕುರಿತಂತೆ ನನ್ನದು ತಟಸ್ಥ ನಿಲುವು. ಹಿಂದೆ ನಾನು ಹಲವು ಸಂಪ್ರದಾಯಗಳನ್ನು ವಿರೋಧಿಸಿದ್ದೇನೆ. ಉದಾಹರಣೆಗೆ ದಲಿತರ ದೇವಸ್ಥಾನ ಪ್ರವೇಶ, ದಲಿತರ ಕೇರಿಗೆ ಪ್ರವೇಶವನ್ನು ಬೆಂಬಲಿಸಿ, ಮಡೆಸ್ನಾನಗಳನ್ನು ನಾನು ವಿರೋಧಿಸಿದ್ದೇನೆ. ಕೃಷ್ಣ ಮಠದಲ್ಲಿ ಎಡೆಸ್ನಾನ ನಿಲ್ಲಿಸುವುದಕ್ಕೆ ನಾನು ಒಪ್ಪಿಗೆ ಕೊಟ್ಟಿದ್ದೇನೆ. ಶಬರಿಮಲೆಯಲ್ಲಿ ಮಹಿಳೆಯರ ದೇವಸ್ಥಾನ ಪ್ರವೇಶ ವಿಷಯದಲ್ಲಿ ಶಾಸ್ತ್ರದ ವಿರೋಧವಿಲ್ಲ. ಆದರೆ ಅಲ್ಲಿನ ಸಂಪ್ರದಾಯದ ವಿರೋಧವಿದೆ ಎಂದರು.

ಇಂಥ ಹಿಂದೂ ಧಾರ್ಮಿಕ ವಿಷಯದಲ್ಲಿ, ಶಾಸ್ತ್ರ ಮತ್ತು ಸಂಪ್ರದಾಯದ ತಿಕ್ಕಾಟವನ್ನೆಲ್ಲಾ ನ್ಯಾಯಾಲಯ ಹಾಗೂ ಜಾತ್ಯತೀತ ಸರಕಾರ ತೀರ್ಮಾನ ಮಾಡಬಾರದು. ಹಿಂದೂ ಧಾರ್ಮಿಕ ಮುಖಂಡರು ಹಾಗೂ ಹಿಂದೂ ಜನತೆ ತೀರ್ಮಾನ ಮಾಡಬೇಕು ಎಂಬುದು ತನ್ನ ಅಭಿಪ್ರಾಯವಾಗಿದೆ ಎಂದರು.

ಶಬರಿಮಲೆ ದೇವಸ್ಥಾನ ಪ್ರವೇಶ ವಿಷಯದಲ್ಲಿ ಇಡೀ ಮಹಿಳಾ ವರ್ಗಕ್ಕೆ ಅಪಮಾನವಾಗಿಲ್ಲ. ಮಹಿಳೆಯರಿಗೆ ಈಗಲೂ ಅಲ್ಲಿಗೆ ಪ್ರವೇಶವಿದೆ. ಆದರೆ ಸಂಪ್ರದಾಯನುಸಾರ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಈಗಲೂ ಬಾಲಕಿಯರು ಹಾಗೂ ಪ್ರಾಯಸ್ಥ ಮಹಿಳೆಯರು ಅಲ್ಲಿಗೆ ತೆರಳಬಹುದಾಗಿದೆ ಎಂದರು.

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ತೆರಳುವುದನ್ನು ಹಿಂದೂ ಧಾರ್ಮಿಕ ಮುಖಂಡರು, ಸಂಪ್ರದಾಯಸ್ಥರು ಹಾಗೂ ಬಹುಪಾಲು ಹಿಂದೂ ಜನತೆ ವಿರೋಧಿಸುತಿದ್ದಾರೆ. ಕೇರಳದ ಹಿಂದೂಗಳು, ಕಾಂಗ್ರೆಸ್ ಮತ್ತು ಬಿಜೆಪಿಯಂಥ ರಾಜಕೀಯ ಪಕ್ಷಗಳು ವಿರೋಧಿಸುತ್ತಿವೆ. ಮಹಿಳಾ ವರ್ಗ ಇದನ್ನು ಅವಮಾನವೆಂದು ಭಾವಿಸಬಾರದು ಎಂದರು.

ಆದುದರಿಂದ ನಾನು ಕೇರಳದ ಕಮುನಿಸ್ಟ್ ಸರಕಾರಕ್ಕೆ ಮನವಿ ಮಾಡುತ್ತೇನೆ. ಕೇರಳ ಸರಕಾರ ತನ್ನ ಹಠ ಬಿಟ್ಟು ಬಿಡಬೇಕು. ಜನಾಭಿಪ್ರಾಯಕ್ಕೆ ಮಣಿದು ಹಿಂದಿನ ಸಂಪ್ರದಾಯವನ್ನು ಮುಂದುವರಿಸಬೇಕು. ಹಿಂದೆ ಶ್ರೀರಾಮ ಸಹ ದೇಶದ ಜನಾಭಿಪ್ರಾಯಕ್ಕೆ ಮಣಿದು ಸೀತೆಯನ್ನು ಕಾಡಿಗೆ ಕಳುಹಿಸಿದ ಉಲ್ಲೇಖ ವಾಲ್ಮೀಕಿ ರಾಮಾಯಣದಲ್ಲಿ ಬರುತ್ತದೆ. ಆದುದರಿಂದ ಸರಕಾರ ಅನಾವಶ್ಯವಾಗಿ ಹಟ ಹಿಡಿಯದೇ ಜನಾಭಿಪ್ರಾಯಕ್ಕೆ ಬೆಲೆ ಕೊಡಬೇಕು ಎಂದರು.

ತಲಾಖ್ ಅಮಾನವೀಯ

ಧಾರ್ಮಿಕ ವಿಚಾರದಲ್ಲಿ ನಿರ್ಧರಿಸಲು ಚುನಾಯಿತ ಸರಕಾರ ಹಾಗೂ ನ್ಯಾಯಾಲಯಕ್ಕೆ ಅಧಿಕಾರವಿಲ್ಲ ಎನ್ನುವುದಾದರೆ, ತಲಾಖ್ ವಿಷಯದಲ್ಲಿ ಕೇಂದ್ರ ಸರಕಾರ ತೆಗೆದುಕೊಂಡ ತೀರ್ಮಾನವನ್ನು ಯಾಕೆ ವಿರೋಧಿಸಲಿಲ್ಲ ಎಂದು ಪ್ರಶ್ನಿಸಿದಾಗ, ತಲಾಖ್‌ ನ್ನು ಶಬರಿಮಲೆ ವಿಷಯಕ್ಕೆ ತಳುಕು ಹಾಕಬೇಡಿ ಎಂದರು.

ತಲಾಖ್ ವಿಷಯವನ್ನು ಯಾರೂ ನನ್ನ ಗಮನಕ್ಕೆ ತಂದಿರಲಿಲ್ಲ. ಅದರ ಬಗ್ಗೆ ಚರ್ಚೆಯೇ ಆಗಿರಲಿಲ್ಲ. ತಲಾಖ್ ಅಮಾನವೀಯವಾದುದು. ತಲಾಖ್ ಹಿಂದೂಗಳಲ್ಲಿರುವ ಅಸ್ಪೃಶ್ಯತೆಗೆ ಸಮಾನ. ತಲಾಖ್ ವಿರುದ್ಧದ ಕಾಯ್ದೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.

ಜನಮತ ಗಣನೆ ಮಾಡಲಿ

ಶಬರಿಮಲೆಗೆ ಎಲ್ಲಾ ವರ್ಗದ ಮಹಿಳೆಯರಿಗೆ ಪ್ರವೇಶ ನೀಡುವ ಕುರಿತು ರಾಜ್ಯ ಸರಕಾರ ಜನಮತ ಗಣನೆ ಮಾಡಲಿ. ಆಗ ಸರಕಾರಕ್ಕೆ ಖಂಡಿತ ಸೋಲಾಗುತ್ತದೆ ಎಂದು ಹೇಳಿದ ಸ್ವಾಮೀಜಿ, ಜಾತ್ಯತೀತ ಸರಕಾರಕ್ಕೆ ನಿರ್ಧಾರ ತೆಗೆದುಕೊಳ್ಳಲು ಏನು ಹಕ್ಕಿದೆ ಎಂದು ಪ್ರಶ್ನಿಸಿದರು.

ಶಬರಿಮಲೆ ತೀರ್ಪಿನ ಬಳಿಕ ಕೇರಳದಲ್ಲಿ ನಡೆದ ಮೂರು ಉಪಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಸೋತು, ಸಿಪಿಎಂ ಗೆಲುವು ಸಾಧಿಸಿರುವ ಕುರಿತು ಅವರ ಗಮನ ಸೆಳೆದಾಗ, ಈ ಚುನಾವಣೆಗಳು ಶಬರಿಮಲೆ ವಿಷಯದ ಮೇಲೆ ನಡೆದಿಲ್ಲ ಎಂದು ಹೇಳಿದರು.

ಧಾರ್ಮಿಕ ಮುಖಂಡರ ಹಾಗೂ ಹಿಂದೂ ಜನತೆಯ ಅಭಿಪ್ರಾಯ ಅಥವಾ ಸಾರ್ವತ್ರಿಕ ಜನಮತ ಗಣನೆ, ಈ ಎರಡು ಮಾರ್ಗಗಳಿಂದ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದು ಪೇಜಾವರಶ್ರೀ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News