ಭವನ ನಿರ್ಮಾಣಕ್ಕೆ ಜಮೀನು ನೀಡಲು ಸರಕಾರ ನಿರಾಸಕ್ತಿ: ಅಧ್ಯಕ್ಷರ ಆರೋಪ
ಮಂಗಳೂರು, ಜ.4: ಕೊಂಕಣಿ ಭವನ ನಿರ್ಮಾಣಕ್ಕೆ ನಗರದಲ್ಲಿ ಗುರುತಿಸಲಾದ ಜಮೀನನ್ನು ಕೊಂಕಣಿ ಅಕಾಡಮಿಗೆ ನೀಡಲು ಸರಕಾರ ಉತ್ಸಾಹ ತೋರಿಸದಿರುವುದರಿಂದ ದಾನಿಗಳು ಜಾಗ ನೀಡಿದಲ್ಲಿ ಭವನ ನಿರ್ಮಿಸಲಾಗುವುದು ಎಂದು ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಆರ್.ಪಿ. ನಾಯಕ್ ಹೇಳಿದರು.
ಅಕಾಡಮಿಯ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೈ ಬಳಿ ಕೊಂಕಣಿ ಭವನಕ್ಕಾಗಿ ಗುರುತಿಸಿದ ಜಾಗಕ್ಕೆ ಸರಕಾರ ಇನ್ನೂ ಅನುಮೋದನೆ ನೀಡಿಲ್ಲ. ಸರಕಾರ ಬದಲಿ ಜಾಗವನ್ನಾದರೂ ನೀಡಬೇಕು. ಇಲ್ಲದಿದ್ದಲ್ಲಿ ದಾನಿಗಳು ನೀಡಿದ ಜಮೀನಿನಲ್ಲಿ ಭವನ ನಿರ್ಮಾಣಕ್ಕೆ ಅಕಾಡಮಿ ಸಿದ್ಧವಾಗಿದೆ ಎಂದರು.
ಉತ್ತರ ಕನ್ನಡದಲ್ಲಿಯೂ ಭವನಕ್ಕಾಗಿ ಜಮೀನು ನೀಡಲು ದಾನಿಗಳು ಮುಂದೆ ಬಂದಿದ್ದಾರೆ. ಧಾರವಾಡ ವಿಶ್ವವಿದ್ಯಾಲಯದಲ್ಲಿ ಕೊಂಕಣಿ ಅಧ್ಯಯನ ಪೀಠ ಆರಂಭಿಸಲಾಗಿದ್ದು, ವಿಶ್ವವಿದ್ಯಾನಿಲಯ ಆವರಣದಲ್ಲಿ ಕೊಂಕಣಿ ಭವನ ನಿರ್ಮಿಸಲು ಅವಕಾಶ ನೀಡುವ ನಿರೀಕ್ಷೆ ಇದೆ. ಭವನ ನಿರ್ಮಾಣವಾದರೆ ಕೊಂಕಣಿ ಸಾಹಿತ್ಯ ಅಕಾಡಮಿಯ ಕಚೇರಿಯನ್ನೂ ಭವನಕ್ಕೆ ಸ್ಥಳಾಂತರಿಸಲಾಗುವುದು ಎಂದು ಆರ್.ಪಿ. ನಾಯಕ್ ನುಡಿದರು.
ಕೊಂಕಣಿ ಭಾಷೆ ಕಲಿಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಯುವಜನತೆ ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಳ್ಳಿಯಿಂದ ಹೊಸದಿಲ್ಲಿಗೆ, ಹೊಸದಿಲ್ಲಿಯಿಂದ ದುಬೈಗೆ ಕೊಂಕಣಿ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಆಯ್ದ ಹಳ್ಳಿಯ ಮನೆಗಳಲ್ಲಿ ಕೊಂಕಣಿ ಭಾಷಾ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸಮಾರೋಪವನ್ನು ದುಬೈಯಲ್ಲಿ ನಡೆಸಲಾಗುವುದು. ಸಮಾರೋಪಕ್ಕಾಗಿ ಸ್ಥಳೀಯ ಕಲಾವಿದರನ್ನು ಕರೆದೊಯ್ಯಲು ಪ್ರಾಯೋಜಕರು ಮುಂದೆ ಬಂದಿದ್ದಾರೆ ಎಂದರು.
ಕೊಂಕಣಿ ಭಾಷೆಯ ವೈಶಿಷ್ಟ್ಯ ಹಾಗೂ ಸಂಸ್ಕೃತಿಯನ್ನು ಪಸರಿಸುವ ನಿಟ್ಟಿನಲ್ಲಿ ಕಾರವಾರ ಆಕಾಶವಾಣಿ ಕೇಂದ್ರದಲ್ಲಿ ಕೊಂಕಣಿ ಕಾರ್ಯಕ್ರಮ ಪ್ರಸಾರ ಮಾಡಲು ನಿರ್ದೇಶಕರು ಒಪ್ಪಿದ್ದಾರೆ. ಧಾರವಾಡ ಆಕಾಶವಾಣಿಯಲ್ಲಿಯೂ ಕಾರ್ಯಕ್ರಮ ಪ್ರಸಾರಕ್ಕೆ ಪ್ರಯತ್ನ ಸಾಗಿದೆ ಎಂದು ಆರ್.ಪಿ.ನಾಯಕ್ ತಿಳಿಸಿದರು.
ಕೊಂಕಣಿ ಸಂಗೀತ, ರಂಗಭೂಮಿಯ ಬಗ್ಗೆ ಸರ್ಟಿಫಿಕೇಟ್ ಕೋರ್ಸುಗಳನ್ನು ಶಾಲೆಗಳಲ್ಲಿ ನಡೆಸಲಾಗುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊಂಕಣಿ ಭಾಷೆಯಲ್ಲಿ ಎಂ.ಎ. ತರಗತಿ ನಡೆಯುತ್ತಿದೆ. ಆದರೆ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ 300 ವಿದ್ಯಾರ್ಥಿಗಳು ಭಾಗವಹಿಸದೇ ಇದ್ದರೆ ಪಿಯುಸಿಯಲ್ಲಿ ಕೊಂಕಣಿ ಭಾಷೆಯ ಆಯ್ಕೆಯನ್ನು ಆರಂಭಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಹೆಚ್ಚೆಚ್ಚು ವಿದ್ಯಾರ್ಥಿಗಳು ಕೊಂಕಣಿಯನ್ನು ತೃತೀಯ ಭಾಷೆಯನ್ನಾಗಿ ಪ್ರೌಢಶಾಲೆಯಲ್ಲಿ ಕಲಿಯಬೇಕು ಎಂದು ಆರ್.ಪಿ.ನಾಯಕ್ ಮನವಿ ಮಾಡಿದರು.
ಕೊಂಕಣಿಯ ಸಾಮಾಜಿಕ ವಿಚಾರಗಳನ್ನು ತಿಳಿಸುವ 100 ಪುಸ್ತಕಗಳನ್ನು ಪ್ರಕಟಿಸಲು ನಿರ್ಧರಿಸಲಾಗಿದೆ. ಕೊಂಕಣಿ ಕೂಡುಕಟ್ಟು ಕುಟುಂಬಗಳು, ಪರಿಸರ, ನೀರು ಮುಂತಾದ ವಿಚಾರಗಳ ಬಗ್ಗೆ ಈಗಾಗಲೇ 70 ಕೃತಿಗಳು ಸಿದ್ಧವಾಗಿವೆ. ಇನ್ನೂ 30 ಕೃತಿಗಳ ರಚನೆಯಾಗುತ್ತಿದ್ದು ಸದ್ಯವೇ ಇವುಗಳನ್ನು ಪ್ರಕಟಿಸಲಾಗುವುದು ಎಂದು ಆರ್.ಪಿ.ನಾಯಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡಮಿಯ ಸದಸ್ಯರಾದ ನಾಗೇಶ್ ಅಣ್ವೇಕರ್, ದಾಮೋದರ್ ಭಂಡಾರ್‌ಕರ್, ಸಂತೋಷ್ ಶೆಣೈ ಉಪಸ್ಥಿತರಿದ್ದರು.