×
Ad

ರಾಷ್ಟ್ರೀಯ ಜೀವನದಲ್ಲಿ ಸಾಮರಸ್ಯ ಅಗತ್ಯ- ಪೇಜಾವರ ಶ್ರೀ

Update: 2019-01-04 21:23 IST

ಮೂಡುಬಿದಿರೆ, ಜ.4: ಸಂಗೀತ ಭಾವೈಕ್ಯತೆಯನ್ನು ಬೆಳೆಸುವ ಕಲೆಯಾಗಿದ್ದು, ಭಾರತೀಯ ಸಂಗೀತ ಅಭಿವೃದ್ಧಿಯ ಪ್ರತೀಕವಿದ್ದಂತೆ, ಜೀವನ ಮತ್ತು ಸಂಗೀತದ ನಡುವೆ ಹೊಂದಾಣಿಕೆ ಇಲ್ಲದಿದ್ದರೆ ಗೊಂದಲ-ಕೋಲಾಹಲ ಉಂಟಾಗುತ್ತದೆ. ಸಾಮರಸ್ಯವಿದ್ದರೆ ಮಾತ್ರ ರಾಷ್ಟ್ರೀಯ ಜೀವನವೂ ಸಂಗೀತವಾಗುತ್ತದೆ, ಹಾಗಾಗಿ ರಾಷ್ಟ್ರೀಯ ಜೀವನದಲ್ಲಿ ಸಾಮರಸ್ಯ ಅತ್ಯಗತ್ಯವೆಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಪುತ್ತಿಗೆ ವಿವೇಕಾನಂದನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಶುಕ್ರವಾರ ಪ್ರಾರಂಭವಾದ 25ನೇ ವರ್ಷದ ಆಳ್ವಾಸ್ ವಿರಾಸತ್-2019 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಯೋಗ ತತ್ವಜ್ಞಾನ, ಆಧ್ಯಾತ್ಮವೆಂಬುದು ಪೂರ್ವದಿಂದ ಪಶ್ಚಿಮಕ್ಕೆ ಹರಿದು ಹೋಗಿದೆ ಆದರೆ ಪಶ್ಚಿಮದಿಂದ ಪೂರ್ವಕ್ಕೆ ವಿಕೃತಿ ಮಾತ್ರ ಹರಿದು ಬಂದಿದೆ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎನ್. ವಿನಯ ಹೆಗ್ಡೆ ಮಾತನಾಡಿ ಆಳ್ವಾಸ್ ವಿರಾಸತ್ ದಿನದಿಂದ ದಿನಕ್ಕೆ ಬೆಳೆಯುತ್ತಿದೆ, ನಾಡಿನೆಲ್ಲೆಡೆ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮನ್ನಣೆಯಿದೆ ಕಲೆ-ಕ್ರೀಡೆ- ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ದೀಪನಗೊಳಿಸುವ ಏಕೈಕ ಆದರ್ಶ ಸಂಸ್ಥೆಯೆಂದರೆ ಅದು ಆಳ್ವಾಸ್ ಎಂದು ಶ್ಲಾಘಿಸಿದರು.

ಗಾಯಕ ಹರಿಹರನ್‍ಗೆ ಆಳ್ವಾಸ್ ವಿರಾಸತ್-2019 ಪ್ರಶಸ್ತಿ

ರಜತ ಸಂಭ್ರಮದ ಆಳ್ವಾಸ್ ವಿರಾಸತ್ 2019ರ ಪ್ರಶಸ್ತಿಯನ್ನು ಸುಪ್ರಸಿದ್ಧ ಗಾಯಕ ಪದ್ಮಶ್ರೀ ಹರಿಹರನ್‍ಗೆ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಸಂಗೀತ ಎನ್ನುವುದು ನೋವು ನಿವಾರಕ ಔಷಧಿಯಿದ್ದಂತೆ. ಮನುಷ್ಯನ ಮಾನಸಿಕ ಸುಸ್ಥಿತಿಯನ್ನು ಕಾಯ್ದುಕೊಳ್ಳುವಲ್ಲಿ ಸಂಗೀತದ ಪಾತ್ರ ಮಹತ್ತರವಾದದ್ದು. ಆಧ್ಯಾತ್ಮದ ಹಾದಿಯೇ ಸಂಗೀತ ಎಂದು ಅವರು ತಿಳಿಸಿದರು.

ಆಳ್ವಾಸ್ ವಿರಾಸತ್ ರೂವಾರಿ ಡಾ. ಎಂ ಮೋಹನ್ ಆಳ್ವ ಸ್ವಾಗತಿಸಿ, ಪ್ರಸಕ್ತ ಕಾಲದಲ್ಲಿ ವಿದ್ಯೆಯನ್ನು ಕಲೆಯ ಜೊತೆಗೆ ಬೆಸೆಯುವ ಅನಿವಾರ್ಯತೆಯಿದೆ. ಸರ್ಕಾರಿ ಮಾತ್ರವಲ್ಲ ಖಾಸಗಿ ಸಂಸ್ಥೆಯವರಿಗೂ ಕಲೆಯನ್ನುಳಿಸಿ ಬೆಳೆಸುವ ಗುಣ ಮೂಡಿ ಬರಬೇಕು. ಕೇವಲ ಸರ್ಕಾರದ ಕಡೆಗೆ ಮುಖ ಮಾಡಿ ಕುಳಿತರೆ ಏನೂ ಪ್ರಯೋಜನವಿರದು ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ವಿರಾಸತ್ ರಜತಸಂಭ್ರಮದ ಅಂಗವಾಗಿ ಅಂಚೆ ಇಲಾಖೆಯು ಹೊರತಂದ ವಿಶೇಷ ಅಂಚೆ ಲಕೋಟೆಯನ್ನು ಹರಿಹರನ್ ಅನಾವರಣಗೊಳಿಸಿದರು.

ಖ್ಯಾತ ಗಾಯಕ ಹರಿಹರನ್, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್, ಕೆ. ಅಮರನಾಥ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್, ಮಂಗಳೂರು ಕೆನರಾ ಬ್ಯಾಂಕ್‍ನ ಮಹಾಪ್ರಬಂಧಕರಾದ ಎಂ.ಲಕ್ಷ್ಮೀ ನಾರಾಯಣನ್, ಹಾರ್ದಿಕ್ ಕುಮಾರ್, ಉದ್ಯಮಿಗಳಾದ ಶಶಿಧರ್ ಶೆಟ್ಟಿ, ರವೀಂದ್ರ ಆಳ್ವ, ಕೆ. ಶ್ರೀಪತಿ ಭಟ್, ಸುರೇಶ್ ಭಂಡಾರಿ, ಸುರೇಶ್ ಶೆಟ್ಟಿ ಗುರ್ಮೆ, ದೇವಿ ಪ್ರಸಾದ್ ಶೆಟ್ಟಿ, ಮುಸ್ತಾಫ್ ಎಸ್., ಉದಯ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಜಯಶ್ರೀ ಅಮರನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೀಪಾ ರತ್ನಾಕರ್ ಕಾರ್ಯಕ್ರಮ ನಿರೂಪಿಸಿದರು. 

ಉದ್ಘಾಟನಾ ಸಮಾರಂಭದ ಮೊದಲು ಆಳ್ವಾಸ್ ಸಾಂಸ್ಕೃತಿಕ ತಂಡದ ವಿದ್ಯಾರ್ಥಿ ಕಲಾವಿದರು ಹಾಗೂ ವಾದ್ಯ ವೃಂದದ ಕಲಾವಿದರು ಮೆರವಣಿಗೆ ಮೂಲಕ ಗಣ್ಯರನ್ನು ವೇದಿಕೆಗೆ ಬರ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News