ನಾಪತ್ತೆಯಾದ ಮೊಗವೀರ ಮೀನುಗಾರರ ಮನೆಗೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ನಿಯೋಗ ಭೇಟಿ
ಉಡುಪಿ, ಜ. 4 : ಇತ್ತೀಚಿಗೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಏಳು ಮಂದಿ ಮೀನುಗಾರರ ಪೈಕಿ ಉಡುಪಿ ಜಿಲ್ಲೆಯ ಇಬ್ಬರ ಮನೆಗೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ನಿಯೋಗ ಶುಕ್ರವಾರ ಭೇಟಿ ನೀಡಿ ಧೈರ್ಯ ತುಂಬಿತು.
ಉಡುಪಿಯ ಮಲ್ಪೆ ಸಮೀಪದಲ್ಲಿರುವ ಬಡನಿಡಿಯೂರು ಗ್ರಾಮದ ಚಂದ್ರಶೇಖರ್ ಕೋಟ್ಯಾನ್ ಹಾಗು ದಾಮೋದರ್ ಸಾಲ್ಯಾನ್ ಅವರ ಮನೆಗೆ ಶುಕ್ರವಾರ ಭೇಟಿ ನೀಡಿದ ಮುಸ್ಲಿಂ ಒಕ್ಕೂಟದ ನಿಯೋಗ ಮನೆಯ ಸದಸ್ಯರಿಗೆ ಧೈರ್ಯ ತುಂಬಿ ನಾವು ನಿಮ್ಮ ಜೊತೆಗಿದ್ದೇವೆ ಎಂದು ಭರವಸೆ ನೀಡಿತು.
ನಾಪತ್ತೆಯಾದ ಮೀನುಗಾರರಿಗಾಗಿ ಮಲ್ಪೆ ಮಸೀದಿಯಲ್ಲಿ ಶುಕ್ರವಾರ ನಮಾಝ್ ವೇಳೆ ವಿಶೇಷ ಪ್ರಾರ್ಥನೆ ನಡೆಸಿರುವ ಕುರಿತು ಕುಟುಂಬಕ್ಕೆ ಮಾಹಿತಿ ನೀಡಿದ ನಿಯೋಗ ಮೀನುಗಾರರ ಪತ್ತೆ ಆಗದಿರುವ ವಿರುದ್ಧ ಜನವರಿ 6 ರಂದು ಮೀನುಗಾರಿಕೆ ಸ್ಥಗಿತಗೊಳಿಸಿ ನಡೆಸುವ ಹೋರಾಟಕ್ಕೆ ಒಕ್ಕೂಟದಿಂದ ಬೆಂಬಲ ವ್ಯಕ್ತಪಡಿಸಿದ ನಿಯೋಗ ಪ್ರತಿಭಟನೆಯಲ್ಲಿ ಒಕ್ಕೂಟದ ಸದಸ್ಯರು ಪಾಲ್ಗೊಳ್ಳುತ್ತೇವೆ ಎಂದು ತಿಳಿಸಿತು.
ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಪ್ರಧಾನ ಕಾರ್ಯದರ್ಶಿ ಎಂ.ಎ.ಮೌಲಾ , ಉಪಾಧ್ಯಕ್ಷ ಖತೀಬ್ ರಶೀದ್ , ಉಡುಪಿ ತಾಲೂಕು ಅಧ್ಯಕ್ಷ ಶಾಹಿದ್ ಅಲಿ ಹಾಗು ಜೊತೆ ಕಾರ್ಯದರ್ಶಿ ಅಝೀಝ್ ಉದ್ಯಾವರ ನಿಯೋಗದಲ್ಲಿದ್ದರು.