ಪ್ರವಾದಿ ಅವಹೇಳನ: ಟಿವಿ ನಿರೂಪಕನ ವಿರುದ್ಧ ಪ್ರತಿಭಟನೆ

Update: 2019-01-04 17:27 GMT

ಕಾಪು, ಜ.4: ಪ್ರವಾದಿ ಮುಹಮ್ಮದ್(ಸ.ಅ)ರನ್ನು ಅವಹೇಳನ ಮಾಡಿದ ಸುವರ್ಣ ಖಾಸಗಿ ನ್ಯೂಸ್ ಚಾನೆಲ್‌ನ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಕ್ರಮ ಜರಗಿಸುವಂತೆ ಆಗ್ರಹಿಸಿ ಕಾಪು ಪೊಲಿಪು ಜಾಮೀಯ ಮಸೀದಿ ವತಿಯಿಂದ ಇಂದು ಕಾಪು ಪೇಟೆಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊಯ್ದಿನಬ್ಬ, ಚಾನಲ್‌ನ ನಿರೂಪಕ ಪ್ರವಾದಿಯವರನ್ನು ನಿಂದಿಸುವ ಮೂಲಕ ಮತೀಯ ಉದ್ನಿಘ್ನತೆ ಸೃಷ್ಟಿಸಿ ಕೋಮು ಗಲಭೆ ಪ್ರಚೋದಿಸಲು ಪ್ರಯತ್ನ ಮಾಡಿದ್ದಾರೆ. ಇದರ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 700ಕ್ಕಿಂತಲೂ ಅಧಿಕ ದೂರು ದಾಖಲಾಗಿವೆ. ಆದುದರಿಂದ ಸರಕಾರ ಕೂಡಲೇ ಆರೋಪಿತರನ್ನು ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದರು.

ಪೊಲಿಪು ಮಸೀದಿ ಕಮಿಟಿಯ ಉಪಾಧ್ಯಕ್ಷ ಅಮೀರ್ ಹಂಝ ಮಾತನಾಡಿ, ಅಜಿತ್ ಹೇಳಿಕೆಯಿಂದ ಮುಸ್ಲಿಮರ ಧಾರ್ಮಿಕ ಭಾವನೆಗೆ ದಕ್ಕೆ ಉಂಟಾಗಿದ್ದು, ಇದರ ವಿರುದ್ಧ ಜಮಾಅತ್ ಕಮಿಟಿ ವತಿಯಿಂದ ಕಾಪು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಆದುದರಿಂದ ಪೊಲೀಸರು ಆರೋಪಿಗಳನ್ನು ಕೂಡಲೇ ಬಂಧಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪೊಲಿಪು ಜಾಮಿಯಾ ಮಸೀದಿಯ ಖತೀಬ್ ಇರ್ಷಾದ್ ಸಅದಿ, ಕೊಪ್ಪ ಲಂಗಡಿ ಮಸೀದಿಯ ಧರ್ಮಗುರು ಮುಹಮ್ಮದ್ ಬಶೀರ್ ಸಖಾಫಿ, ಪೊಲಿಪು ಮಸೀದಿ ಅಧ್ಯಕ್ಷ ಅಬ್ಬಾಸ್ ಕಾಪು, ಪುರಸಭಾ ಸದಸ್ಯರಾದ ಇಮ್ರಾನ್ ಮಜೂರು, ಅಮೀರ್ ಮಹಮದ್ ಕಾಪು, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಚ್.ಅಬ್ದುಲ್ಲಾ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ನಜೀರ್ ಶೇಖ್ ಕೊಂಬಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News