×
Ad

ಚಂದ್ರನ ಮೇಲೆ ಕಾಲಿಟ್ಟ ಶೋಧಕ ‘ಯುಟು-2’

Update: 2019-01-04 23:03 IST

ಬೀಜಿಂಗ್, ಜ. 4: ಚೀನಾದ ಚಾಂಗ್’ಇ-4 ಬಾಹ್ಯಾಕಾಶ ನೌಕೆಯ ಮೂಲಕ ಚಂದ್ರನ ಭೂಮಿಗೆ ಕಾಣದ ಭಾಗದ ಮೇಲೆ ಗುರುವಾರ ಇಳಿದಿರುವ ಚಂದ್ರ ಶೋಧಕ ನೌಕೆ ‘ಯುಟು-2’ ಚಂದ್ರನ ಮೇಲೆ ಪಾದಾರ್ಪಣೆ ಮಾಡಿದೆ ಎಂದು ಚೀನಾ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ.

ಬಾಹ್ಯಾಕಾಶ ನೌಕೆಯು ಭೂಮಿಯ ಉಪಗ್ರಹದ ಈವರೆಗೆ ಪತ್ತೆಯಾಗದ ನಿಗೂಢ ಭಾಗದಲ್ಲಿ ಯಶಸ್ವಿಯಾಗಿ ಇಳಿದ ಗಂಟೆಗಳ ಬಳಿಕ ಶೋಧ ನೌಕೆಯು ಚಂದ್ರನ ಮೇಲೆ ಕಾಲಿಟ್ಟಿದೆ.

‘‘ಚಂದ್ರ ಶೋಧಕ ನೌಕೆ ಯುಟು-2 ಅಥವಾ ಜೇಡ್ ರ್ಯಾಬಿಟ್-2 ಚಂದ್ರನ ಇನ್ನೊಂದು ಭಾಗದಲ್ಲಿ ಗುರುವಾರ ತಡ ರಾತ್ರಿ ಮೊದಲ ಹೆಜ್ಜೆಗುರುತನ್ನು ನಿರ್ಮಿಸಿದೆ. ಇದಕ್ಕೂ ಮೊದಲು ಅದು ಬಾಹ್ಯಾಕಾಶ ನೌಕೆಯಿಂದ ಸರಾಗವಾಗಿ ಪ್ರತ್ಯೇಕಗೊಂಡಿತು’’ ಎಂದು ವಿಜ್ಞಾನಿಗಳನ್ನು ಉಲ್ಲೇಖಿಸಿ ಸರಕಾರಿ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

ಶೋಧಕ ನೌಕೆಯು ಚಂದ್ರನ ಮೇಲ್ಮೈಯನ್ನು ಚೀನಾ ಸಮಯ ಗುರುವಾರ ರಾತ್ರಿ 10:22ಕ್ಕೆ ಸ್ಪರ್ಶಿಸಿತು.

‘‘ಈ ವಿದ್ಯಮಾನವನ್ನು ಬಾಹ್ಯಾಕಾಶ ನೌಕೆಯಲ್ಲಿದ್ದ ಕ್ಯಾಮರಾ ಸೆರೆಹಿಡಿಯಿತು ಹಾಗೂ ಚಿತ್ರಗಳನ್ನು ಭೂಮಿಗೆ ಪ್ರಸಾರ ಉಪಗ್ರಹ ‘ಕ್ಯೂಕಿಯಾವೊ’ ಮೂಲಕ ಕಳುಹಿಸಿತು’’ ಎಂದು ಅದು ಹೇಳಿದೆ.

ಭೂಮಿ ಮತ್ತು ಚಂದ್ರನ ಇನ್ನೊಂದು ಭಾಗದ ನಡುವೆ ಸಂಪರ್ಕ ಕೊಂಡಿಯನ್ನು ಏರ್ಪಡಿಸುವುದಕ್ಕಾಗಿ ಈ ಉಪಗ್ರಹವನ್ನು 2018ರ ಮೇ ತಿಂಗಳಲ್ಲಿ ಉಡಾಯಿಸಲಾಗಿತ್ತು.

ಯುಟು-2 ಶೋಧಕವು ಆರು ಚಕ್ರಗಳನ್ನು ಹೊಂದಿದ್ದು, ಎಲ್ಲ ಚಕ್ರಗಳಲ್ಲೂ ವಿದ್ಯುತ್ ಇದೆ. ಒಂದು ಚಕ್ರ ವಿಫಲವಾದರೂ ಉಳಿದ ಚಕ್ರಗಳ ಮೂಲಕ ಅದು ಕೆಲಸ ಮುಂದುವರಿಸುವಂತೆ ನೋಡಿಕೊಳ್ಳುವುದಕ್ಕಾಗಿ ಹೀಗೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News