ಹುಸೇನಬ್ಬ ಕೊಲೆ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು ನಿರಾಕರಣೆ
ಉಡುಪಿ, ಜ.4: ಪೆರ್ಡೂರು ದನದ ವ್ಯಾಪಾರಿ ಹುಸೇನಬ್ಬ ಜೋಕಟ್ಟೆ ಕೊಲೆ ಪ್ರಕರಣದ ಪ್ರಮುಖ ಆರೋಪಿ ವಿಎಚ್‌ಪಿ ಮುಖಂಡ ಸೂರಿ ಯಾನೆ ಸುರೇಶ್ ಮೆಂಡನ್ ಜಾಮೀನು ಅರ್ಜಿಯನ್ನು ರಾಜ್ಯ ಹೈಕೋರ್ಟ್ ಇಂದು ತಿರಸ್ಕರಿಸಿ ಆದೇಶ ನೀಡಿದೆ.
ಇದೇ ಸಂದರ್ಭದಲ್ಲಿ ಉಳಿದ ಆರೋಪಿಗಳಾದ ಶೈಲೇಶ್ ಶೆಟ್ಟಿ, ಚೇತನ್ ಆಚಾರ್ಯ, ರತನ್ ಪೂಜಾರಿ, ಉಮೇಶ್ ಶೆಟ್ಟಿ, ಗಣೇಶ್ ನಾಯ್ಕ, ದೀಪಕ್ ಹೆಗ್ಡೆ, ಕುಶಲ್ ನಾಯ್ಕೆ ಎಂಬವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಎಂಟು ಆರೋಪಿಗಳ ಅರ್ಜಿ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಸ್.ಮುದಿಗಲ್, ಪ್ರಕರಣದ ಪ್ರಮುಖ ಆರೋಪಿ ಸುರೇಶ್ ಮೆಂಡನ್‌ಗೆ ಜಾಮೀನು ನೀಡಲು ನಿರಾಕರಿಸಿದರು. ಸರಕಾರದ ಪರ ವಾಗಿ ಹೈಕೋರ್ಟ್ ನ್ಯಾಯವಾದಿ ಲತೀಫ್ ಬಿ. ವಾದ ಮಂಡಿಸಿದ್ದರು. ಆರೋಪಿ ಪರವಾಗಿ ಶಶಿಕಿರಣ್ ಶೆಟ್ಟಿ ಹಾಗೂ ನಿಶ್ಚಿತ್ ಶೆಟ್ಟಿ ವಾದಿಸಿದ್ದರು.
ಪ್ರಕರಣದ ಆರೋಪಿ ಹಿರಿಯಡ್ಕ ಪೊಲೀಸ್ ಠಾಣಾ ಎಸ್ಸೈ ಡಿ.ಎನ್. ಕುಮಾರ್, ಹಿರಿಯಡಕ ಠಾಣಾ ಹೆಡ್‌ಕಾನ್‌ಸ್ಟೇಬಲ್ ಮೋಹನ್ ಕೊತ್ವಾಲ್ ಸೇರಿದಂತೆ ಆರು ಮಂದಿ ಆರೋಪಿಗಳು ಈ ಹಿಂದೆಯೇ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆ ಹೊಂದಿದ್ದಾರೆ.
ಪೆರ್ಡೂರು ಶೇನರಬೆಟ್ಟು ಎಂಬಲ್ಲಿ 2018ರ ಮೇ 30ರಂದು ಬೆಳಗಿನ ಜಾವ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆಗೆ ಒಳಗಾಗಿದ್ದ ಹುಸೇನಬ್ಬ ಹಿರಿಯಡ್ಕ ಪೊಲೀಸರ ಜೀಪಿನಲ್ಲಿ ಮೃತಪಟ್ಟಿದ್ದರು. ಬಳಿಕ ಮೃತದೇಹವನ್ನು ಪೊಲೀಸರು ಹಾಗೂ ಬಜರಂಗದಳ ಕಾರ್ಯಕರ್ತರು ಹಾಡಿಯಲ್ಲಿ ಎಸೆದು ಬಂದಿದ್ದರು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಒಡಿ ತನಿಖೆ ನಡೆಸಲಾಗಿದೆ.