ಕೇಂದ್ರ ಸರ್ಕಾರದ ಮಸೂದೆಗೆ ವಿರೋಧ: ವೈದ್ಯರಿಂದ ಪ್ರತಿಭಟನೆ
ಪುತ್ತೂರು, ಜ. 4: ಕೇಂದ್ರ ಸರ್ಕಾರ ಜಾರಿಗೊಳಿಸಲು ಇಚ್ಛಿಸಿರುವ ನ್ಯಾಶನಲ್ ಮೆಡಿಕಲ್ ಕಮಿಶನ್ ಬಿಲ್ -2017-18 ಮತ್ತು ಗ್ರಾಹಕ ರಕ್ಷಣಾ ಮಸೂದೆ- 2018 ವೈದ್ಯಕೀಯ ಜಗತ್ತಿಗೆ ಮಾರಕವಾಗಿದ್ದು, ಈ ಮಸೂದೆಯಲ್ಲಿ ಸೂಕ್ತ ಬದಲಾವಣೆ ಮಾಡಬೇಕೆಂದು ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ಪುತ್ತೂರು ತಾಲೂಕಿನ ಖಾಸಗಿ ಆಸ್ಪತ್ರೆಗಳ ವೈದ್ಯರು ಶುಕ್ರವಾರ ಅಖಿಲ ಭಾರತ ವಿರೋಧ ದಿನ ಆಚರಿಸಿದರು.
ಪುತ್ತೂರಿನ ಖಾಸಗಿ ಆಸ್ಪತ್ರೆಗಳಲ್ಲಿನ ವೈದ್ಯರು ಶುಕ್ರವಾರ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟನೆ-ವಿರೋಧ ವ್ಯಕ್ತಪಡಿಸಿದರು. ಪುತ್ತೂರಿನ ಉಪವಿಭಾಗಾಧಿಕಾರಿ ಕಛೇರಿಗೆ ತೆರಳಿ, ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಅವರನ್ನು ಭೇಟಿ ಮಾಡಿದ ಸಂಘದ ಪ್ರಮುಖರು, ವೈದ್ಯ ಕಾಯಿದೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ತರಬೇಕೆಂದು ಆಗ್ರಹಿಸಿ ಉಪವಿಭಾಗಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಐಎಂಎ ಪುತ್ತೂರು ಘಟಕದ ಅಧ್ಯಕ್ಷ ಡಾ.ಗಣೇಶ್ ಪ್ರಸಾದ್ ಮುದ್ರಜೆ ಅವರು, ದೇಶದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಅಡಿಯಲ್ಲಿ 8.4 ಲಕ್ಷ ಅಲೋಪಥಿ ವೈದ್ಯರು ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರ ಸಂಘದ ಕರೆಯಂತೆ ರಾಜ್ಯದಲ್ಲಿಯೂ ಈ ವಿರೋಧಿ ದಿನ ನಡೆಯುತ್ತಿದೆ. ದ.ಕ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಐಎಂಎ ಘಟಕದ ವತಿಯಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗಿದೆ. ಪುತ್ತೂರಿನಲ್ಲಿ ಉಪವಿಭಾಗಾಧಿಕಾರಿ ಮೂಲಕ ಮನವಿ ಸಲ್ಲಿಸಲಾಗಿದೆ. ಎಲ್ಲಾ ಕಡೆಗಳಲ್ಲಿಯೂ ಜನಪ್ರತಿನಿಧಿಗಳಿಗೂ ಮನವಿ ಸಲ್ಲಿಸಲಾಗುವುದು. ರೋಗಿಗಳ ಸೇವೆಗೆ ಚ್ಯುತಿಯಾಗದ ರೀತಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಯುತ್ತಿದೆ ಎಂದರು.
1986ರಲ್ಲಿ ಅಂದಿನ ಕೇಂದ್ರ ಸರ್ಕಾರ ಜಾರಿಗೆ ತಂದ ಕಾನೂನು ಸರಿಯಾಗಿತ್ತು. ಈಗಿನ ಸರ್ಕಾರ ತರುತ್ತಿರುವ ತಿದ್ದುಪಡಿ ಮಸೂದೆಯು ವೈದ್ಯಕೀಯ ಲೋಕಕ್ಕೆ ಹಲವಾರು ಮಾರಕ ಅಂಶಗಳನ್ನು ಹೊಂದಿದೆ. ಮಸೂದೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ತರುವಂತೆ ಸೂಚಿಸಿದರೂ ಸರ್ಕಾರ ಕೇಳಿಲ್ಲ. ನೇರವಾಗಿ ಲೋಕಸಭೆಯಲ್ಲಿ ಮಂಡಿಸಿ ಮಂಜೂರು ಮಾಡಿದೆ. ಇನ್ನು ಮುಂದೆ ಅದು ರಾಜ್ಯಸಭೆಗೆ ಬರಲಿದೆ. ರಾಜ್ಯಸಭೆಯಲ್ಲಿ ಐಎಂಎ ಮುಖಂಡರು ಸದಸ್ಯರಿದ್ದಾರೆ.ಅವರು ಕಾನೂನಿನ ಮಾರಕ ಅಂಶಗಳ ಬಗ್ಗೆ ಪ್ರಬಲ ಪ್ರತಿಪಾದನೆ ಮಾಡಲಿದ್ದು, ಕಾನೂನು ಬದಲಾವಣೆ ಆಗುವ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಸ್ತಾವಿತ ನ್ಯಾಶನಲ್ ಮೆಡಿಕಲ್ ಕಮಿಷನ್ ಮಸೂದೆಯು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಒಕ್ಕೂಟ ವ್ಯವಸ್ಥೆಗೆ ವಿರೋಧಿಯಾಗಿದೆ. ಬಡವರ ವಿರುದ್ಧವಿರುವ ಕಾಯಿದೆ ಶ್ರೀಮಂತರ ಪರವಾಗಿದೆ. ಪ್ರಾಧಿಕಾರ ಮತ್ತು ಅಧಿಕಾರವನ್ನು ಸಂಪೂರ್ಣ ಕೇಂದ್ರೀಕರಿಸುವ ಒಳ ಸಂಚು ಹೊಂದಿದೆ. ಆಡಳಿತ ವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅಧೀನಕ್ಕೆ ತೆಗೆದುಕೊಳ್ಳುವ ಹುನ್ನಾರ ಹೊಂದಿದೆ. ಪ್ರಜಾಸತ್ತಾತ್ಮಕವಾಗಿ ಕೆಲಸ ಮಾಡುತ್ತಿದ್ದ ಭಾರತೀಯ ವೈದ್ಯಕೀಯ ಪರಿಷತ್ತನ್ನು ವಿಸರ್ಜಿಸಿ ಸರ್ಕಾರದ ಅಧೀನದಲ್ಲಿ ಅದನ್ನು ನಡೆಸುವುದಕ್ಕೆ ನಮ್ಮ ವಿರೋಧವಿದೆ ಎಂದರು.
1986ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ಗ್ರಾಹಕ ಹಿತರಕ್ಷಣಾ ಮಸೂದೆಯಲ್ಲಿ ವೈದ್ಯಕೀಯ ವೃತ್ತಿ ಇರಲಿಲ್ಲ. ಬಳಿಕ ಸೇರಿಸಲಾಗಿದೆ. 2018ರಲ್ಲಿ ಅನುಮೋದಿಸಿದ ತಿದ್ದುಪಡಿಗಳು ಆರೋಗ್ಯ ಕ್ಷೇತ್ರಕ್ಕೆ ಮಾರಕವಾಗಿದೆ. ಜಿಲ್ಲಾ ಗ್ರಾಹಕ ಹಿತರಕ್ಷಣಾ ವೇದಿಕೆಯ ವ್ಯಾಪ್ತಿಯನ್ನು ರೂ.10 ಲಕ್ಷದಿಂದ 1 ಕೋಟಿಗೆ, ರಾಜ್ಯ ವೇದಿಕೆಯ ವ್ಯಾಪ್ತಿಯನ್ನು ರೂ. 10 ಕೋಟಿಗೆ ಏರಿಸಲಾಗಿದೆ. ವೇದಿಕೆಯಲ್ಲಿ ನ್ಯಾಯಾಧೀಶರ ಸದಸ್ವತ್ವ ಕಡ್ಡಾಯವಿಲ್ಲದಿರುವುದು ಆತಂಕಕಾರಿ ಸಂಗತಿ. ತೊಂದರೆಗೆ ಒಳಗಾದವರನ್ನು ಮಾತ್ರವಲ್ಲದೆ ಇತರರು ಕೂಡ ದೂರು ಸಲ್ಲಿಸಲು ಅವಕಾಶ ನೀಡಿರುವುದು ದುರುಪಯೋಗದ ಸಂಕೇತ ನೀಡಿದೆ ಎಂದರು.
ಅಧ್ಯಕ್ಷರು, ಸದಸ್ಯರ ಅರ್ಹತೆಗಳನ್ನು ಕೇಂದ್ರ ಸರ್ಕಾರವೇ ನಿಗದಿಪಡಿಸಲಿದೆ. ಇವರಲ್ಲಿ ನ್ಯಾಯಾಧೀಶರು ಇರಬೇಕೆಂಬ ಕಡ್ಡಾಯ ಇಲ್ಲದಿರುವುದು ಆಶ್ಚರ್ಯಕರ. ನ್ಯಾಯಾಧಿಕಾರಿಗಳಿಲ್ಲದ ಮಂಡಳಿಗಳು ನ್ಯಾಯ ತೀರ್ಮಾನ ಮಾಡುವುದು ಸರಿಯಲ್ಲ. ತಜ್ಞ ವೈದ್ಯಕೀಯ ಸಮಿತಿಯ ಅಭಿಪ್ರಾಯವಿಲ್ಲದೆ ವೈದ್ಯಕೀಯ ಕ್ಷೇತ್ರದ ದೂರುಗಳನ್ನು ಪರಿಗಣಿಸುವುದು ಸರಿಯಲ್ಲ. ಸುಳ್ಳು ಮೊಕದ್ದಮೆಗಳಿಗೆ ದಂಡ ವಿಧಿಸುವ ಕ್ರಮ ಇರಬೇಕು. ತೊಂದರೆಗೆ ಒಳಗಾದವರು ಮಾತ್ರ ದೂರು ಸಲ್ಲಿಸುವ ಅವಕಾಶ ಇರಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರಿನ ಆಸ್ಪತ್ರೆ ಎಸೋಸಿಯೇಶನ್ ಅಧ್ಯಕ್ಷ ಡಾ. ಶ್ರೀಪತಿ ರಾವ್, ಡಾಕ್ಟರ್ಸ್ ಫೋರಂ ಅಧ್ಯಕ್ಷ ಡಾ.ಅಶೋಕ್, ಐಎಂಎ ಪುತ್ತೂರು ಘಟಕದ ಕಾರ್ಯದರ್ಶಿ ಎಸ್.ಎಂ. ಪ್ರಸಾದ್ ಮತ್ತು ವೈದ್ಯ ಡಾ.ರವೀಂದ್ರ ಉಪಸ್ಥಿತರಿದ್ದರು.