ಮೇಘಾಲಯ ಗಣಿ ದುರಂತ, ಗಣಿ ಮಾಲಕರ ವಿರುದ್ಧ ಕ್ರಮಕ್ಕೆ ಸುಪ್ರೀಂ ಸೂಚನೆ

Update: 2019-01-04 18:01 GMT

ಹೊಸದಿಲ್ಲಿ, ಜ.4: ಮೇಘಾಲಯದ ಈಸ್ಟ್ ಜೈಂಟಿಯಾ ಹಿಲ್ಸ್‌ನಲ್ಲಿ ಡಿಸೆಂಬರ್ 13ರಿಂದ ಸಿಲುಕಿಕೊಂಡಿರುವ 15 ಕಾರ್ಮಿಕರ ರಕ್ಷಣೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಜನವರಿ 7ರೊಳಗೆ ಯಥಾಸ್ಥಿತಿ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರ ಮತ್ತು ಮೇಘಾಲಯ ಸರಕಾರಕ್ಕೆ ಸೂಚಿಸಿದೆ.

ಅಲ್ಲದೆ ಗಣಿ ಮಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ಗಣಿ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳಿ. ಅವರಿಂದಾಗಿ ಕಾರ್ಮಿಕರು ಯಾಕೆ ತೊಂದರೆ ಅನುಭವಿಸಬೇಕು ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಗುರುವಾರ ಕೇಂದ್ರ ಸರಕಾರವನ್ನು ಸುಪ್ರೀಂಕೋರ್ಟ್ ತೀವ್ರವಾಗಿ ತರಾಟೆಗೆತ್ತಿಕೊಂಡಿತ್ತು. ಗಣಿಯಲ್ಲಿ ಸಿಲುಕಿಕೊಂಡವರ ಸಾವು ಬದುಕಿನ ಪ್ರಶ್ನೆ ಇದಾಗಿದ್ದು ಪ್ರತಿಯೊಂದು ಕ್ಷಣವೂ ಅಮೂಲ್ಯವಾಗಿದೆ. ಆದ್ದರಿಂದ ಈ ಪ್ರಕರಣದ ಮಹತ್ವವನ್ನು ಪರಿಗಣಿಸುವಂತೆ ಕೇಂದ್ರಕ್ಕೆ ಸೂಚಿಸಿತ್ತು.

ಶುಕ್ರವಾರ ಇದಕ್ಕೆ ಉತ್ತರಿಸಿದ ಕೇಂದ್ರ ಸರಕಾರ, 355 ಅಡಿ ಆಳದ ಈ ಗಣಿ ಅಕ್ರಮವಾಗಿದೆ ಮತ್ತು ಯಾವುದೇ ನೀಲನಕ್ಷೆಯನ್ನು ಹೊಂದಿಲ್ಲ . ಆದ್ದರಿಂದ ಪರಿಹಾರ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ತಿಳಿಸಿದೆ. ಗಣಿಯು ನದಿಯ ಬಳಿ ಇರುವುದರಿಂದ ಭಾರತೀಯ ನೌಕಾಪಡೆಯ ಪರಿಣತ ಮುಳುಗುತಜ್ಞರು ಗಣಿಯೊಳಗೆ ಸಿಲುಕಿಕೊಂಡಿರುವ ಕಾರ್ಮಿಕರನ್ನು ಪತ್ತೆಹಚ್ಚುವ ಕಾರ್ಯಾಚರಣೆಗೆ ಸಮಸ್ಯೆಯಾಗಿದೆ ಎಂದು ನ್ಯಾಯಮೂರ್ತಿಗಳಾದ ಎಕೆ ಸಿಕ್ರಿ ಮತ್ತು ಎಸ್ ಅಬ್ದುಲ್ ನಝೀರ್ ಅವರಿದ್ದ ನ್ಯಾಯಪೀಠಕ್ಕೆ ಸರಕಾರದ ಪ್ರತಿನಿಧಿಯಾಗಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ತಿಳಿಸಿದ್ದಾರೆ. ಪ್ರಕರಣದ ಸ್ಥಿತಿಗತಿಯ ಬಗ್ಗೆ ಜನವರಿ 7ರಂದು ಮಾಹಿತಿ ನೀಡುವಂತೆ ನ್ಯಾಯಪೀಠ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News