×
Ad

ವಿಟ್ಲ : ಶೈಕ್ಷಣಿಕ ಕ್ರಾಂತಿಗೆ ಕಾರಣರಾದ ಸುಲೈಮಾನ್ ಹಾಜಿಗೆ ಪೌರ ಸನ್ಮಾನ

Update: 2019-01-04 23:43 IST

ವಿಟ್ಲ, ಜ. 4: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಎನ್. ಸುಲೈಮಾನ್ ಅವರಿಗೆ ನಾರ್ಶ ಸರಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ  ನಡೆಯಲಿರುವ “ನಾರ್ಶ ವೈಭವ 2018-19” ಕಾರ್ಯಕ್ರಮದಲ್ಲಿ ಪೌರ ಸನ್ಮಾನ ನಡೆಯಲಿದೆ.

ನಾರ್ಶ ಮೈದಾನ ಎಂಬ ಸ್ಥಳ ಶೈಕ್ಷಣಿಕ ಕ್ರಾಂತಿಯ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಹಾಜಿ ಎನ್. ಸುಲೈಮಾನ್ ಕಾರಣರಾಗಿದ್ದಾರೆ ಎಂಬ ನಿಟ್ಟಿನಲ್ಲಿ ಊರ ನಾಗರಿಕರಿಂದ ಈ ಪೌರ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ತಾನು ವಿದ್ಯಾಭ್ಯಾಸ ಪಡೆದ ಹುಟ್ಟೂರಿನಲ್ಲಿ ಶಿಕ್ಷಣದಲ್ಲಿ ಕ್ರಾಂತಿ ಎಬ್ಬಿಸಬೇಕೆಂಬ ಛಲ ಹೊಂದಿದ್ದ ಹಾಜಿ ಸುಲೈಮಾನ್ ಅವರ ಸತತ ಶ್ರಮದಿಂದ ಇಂದು ನಾರ್ಶ ಮೈದಾನದಲ್ಲಿ ಅಂಗನವಾಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಅಲ್ಲದೇ ಸರಕಾರಿ ಪದವಿಪೂರ್ವ ಕಾಲೇಜು ಕೂಡಾ ಕಾರ್ಯನಿರ್ವಹಿಸುತ್ತಿದೆ.

ಕಳೆದ 20 ವರ್ಷಗಳಿಂದ ನಾರ್ಶ ಶಿಕ್ಷಣ ಸಂಸ್ಥೆಗಳ ಎಸ್.ಡಿ.ಎಂ.ಸಿ.ಯ ಕಾರ್ಯಾಧ್ಯಕ್ಷರಾಗಿರುವ ಹಾಜಿ ಸುಲೈಮಾನ್ ತಮ್ಮ ಹೆತ್ತವರ ಸವಿನೆನಪಿಗಾಗಿ ಶಾಲಾ ಕೊಠಡಿಗಳನ್ನು ಕೊಡುಗೆ ನೀಡಿದ್ದಾರೆ. ಮೂಲಭೂತ ಸೌಲಭ್ಯಗಳಾದ ಧ್ವಜಸ್ಥಂಭ, ಕುಡಿಯುವ ನೀರು, ಶೌಚಾಲಯ, ಪೀಠೋಪಕರಣಗಳ ಜೊತೆಗೆ ಮತ್ತಷ್ಟು ಕೊಡುಗೆಗಳನ್ನು ನೀಡುವ ಮೂಲಕ ಸರಕಾರಿ ಶಾಲೆಯ ಪೋಷಕರೆಂದು ಗುರುತಿಸಿಕೊಂಡಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನೂ ಕೊಡುಗೆಯಾಗಿ ನೀಡಿರುವ ಹಾಜಿ ಸುಲೈಮಾನ್ ಈ ಬಾರಿ ಇಲ್ಲಿನ ಒಟ್ಟು 258 ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಸ್ವತಃ ತಾವೇ ಭರಿಸಿರುತ್ತಾರೆ.

2006-07ರಲ್ಲಿ ನಾರ್ಶ ಶಾಲೆಯು “ಮಲೆನಾಡ ಗಾಂಧಿ ಗೋವಿಂದ ಗೌಡ” ಪ್ರಶಸ್ತಿ ಪಡೆಯಲು ಹಾಜಿ ಸುಲೈಮಾನ್ ಕಾರಣರಾಗಿದ್ದಾರೆ. ಕೊಳ್ನಾಡು ಗ್ರಾಮದ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಕ್ರಾಂತಿ ಎಬ್ಬಿಸುವ ಮೂಲಕ “ನಾರ್ಶ ಮೈದಾನ” ರಾಜ್ಯಮಟ್ಟದಲ್ಲಿ ತನ್ನದೇ ಸ್ಥಾನ ಗಿಟ್ಟಿಸಿಕೊಂಡಿದೆ. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಗುರುತಿಸಿದ ರಾಜ್ಯ ಸರಕಾರ 2015ನೇ ಸಾಲಿನಲ್ಲಿ ಹಾಜಿ ಎನ್. ಸುಲೈಮಾನ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News