×
Ad

ಸಾಕ್ಷರತೆ ಸಾಧಿಸದೆ ದೇಶದ ಪ್ರಗತಿ ಅಸಾಧ್ಯ: ರಾಜ್ಯಪಾಲ ವಜೂಭಾಯಿ ವಾಲಾ

Update: 2019-01-05 19:50 IST

ಬಂಟ್ವಾಳ, ಜ. 5: ಸಾಕ್ಷರತೆ ಎಂದರೆ ಕೇವಲ ಓದು, ಬರಹವಲ್ಲ. ಪ್ರತಿಯೊಬ್ಬರೂ ವಿಷಯವಾರು ಪದವೀದರರನ್ನಾಗಿ ಮಾಡುವುದೇ ಶಿಕ್ಷಣದ ಉದ್ದೇಶ ವಾಗಿರಬೇಕು. ಶೇ.100ರಷ್ಟು ಸಾಕ್ಷರತೆ ಸಾಧಿಸದೇ ದೇಶದ ಪ್ರಗತಿ ಅಸಾಧ್ಯ ಎಂದು ಕರ್ನಾಟಕ ರಾಜ್ಯಪಾಲ ವಜೂಭಾಯಿ ರುಢಾಭಾಯಿವಾಲಾ ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ಮೂಡುನಡುಗೋಡು ಗ್ರಾಮದಲ್ಲಿರುವ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಉನ್ನತೀಕರಿಸಿದ ಶಾಲೆಯಲ್ಲಿ ನಿರ್ಮಾಣವಾದ ಮೇಲಂತಸ್ತಿನ ಕಟ್ಟಡದವನ್ನು ಶನಿವಾರ ಲೋಕಾರ್ಪಣೆಗೈದು ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅನ್ನದಾನ, ಕನ್ಯಾದಾನಕ್ಕಿಂತಲೂ ವಿದ್ಯಾದಾನವೇ ಶ್ರೇಷ್ಠದಾನ. ಪ್ರತಿಯೊಬ್ಬರನ್ನು ವಿದ್ಯಾವಂತರನ್ನಾಗಿಸುವುದು ನಮ್ಮ, ನಿಮ್ಮೆಲ್ಲೆರ ಜವಾಬ್ದಾರಿ ಎಂದವರು, ನಾವು ವಿದ್ಯಾದಾನಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಅದಕ್ಕಿಂತ ದೊಡ್ಡ ಪುಣ್ಯದ ಕೆಲಸ ಮತ್ತೊಂದಿಲ್ಲ. ಈ ಕಾರ್ಯಕ್ಕೆ ದೇವರು ಮೆಚ್ಚಿ ಪ್ರತಿಫಲ ನೀಡುತ್ತಾನೆ ಹೇಳಿದರು.

ಹಳ್ಳಿಯ ಮಕ್ಕಳಿಗೆ ಕಲಿಯುವ ಅವಕಾಶವನ್ನು ಒದಗಿಸುವ ಸಲುವಾಗಿ ಸ್ಥಳೀಯರು ಒಂದೇ ದೇಶ- ಒಂದೇ ಶಿಕ್ಷಣ ಎಂಬ ವಿಚಾರವನ್ನಿಟ್ಟುಕೊಂಡು, ನಮ್ಮೂರು, ನಮ್ಮ ಶಾಲೆ, ನಮ್ಮ ಸೇವೆ ಎಂಬ ಧ್ಯೇಯದೊಂದಿಗೆ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ತಂಡದಿಂದ ನಡೆಸಿರುವುದು ಮಾದರಿ ಕಾರ್ಯ, ಇದು ಉಳಿದ ಶಾಲೆಗಳಿಗೂ ಪ್ರೇರಣೆಯಾಗಲಿ, ಮುಂದಿನ ವರ್ಷ ಕಾಲೇಜಿನ ಕಟ್ಟಡ ನಿರ್ಮಾಣವಾಗುವಂತಾಗಲಿ ಎಂದು ಶುಭ ಹಾರೈಸಿದರು.

ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ಬೇಕೇ ಅಥವಾ ಆಂಗ್ಲ ಮಾಧ್ಯಮ ಶಿಕ್ಷಣ ಬೇಕೆ ಎಂಬ ವಿಚಾರದ ಬಗ್ಗೆ ವಿಮರ್ಶೆಗಳು ನಡೆಯುತ್ತಿದೆ. ಆದರೆ, ಯಾವ ಮಾಧ್ಯಮಗಳಲ್ಲಿ ಶಿಕ್ಷಣ ನೀಡಬೇಕು ಎಂಬ ನೀತಿಯನ್ನು ಸರಕಾರ ರೂಪಿಸುತ್ತದೆ. ಆದರೆ, ಸರಕಾರಕ್ಕೆ ನಿರ್ಣಯ ಕೈಗೊಳ್ಳುವಂತೆ ಮಾಡುವವರು ಪ್ರಜೆಗಳು. ಶಿಕ್ಷಣದಲ್ಲಿ ಭಾಷೆಯ ಆಯ್ಕೆಯನ್ನು ಪ್ರಜೆಗಳೇ ಮಾಡುತ್ತಾರೆ. ಸರಕಾರ ಪ್ರಜಾನಿರ್ಣಯದ ಒತ್ತಡದ ಪ್ರಕಾರ ಶಾಸನ ರೂಪಿಸುತ್ತದೆ ಎಂದು ಅವರು ಹೇಳಿದರು.

ಕಡಿಮೆ ಸಂಖ್ಯೆಯಲ್ಲಿರುವ ಮಕ್ಕಳನ್ನು ಹೊಂದಿದ್ದ ಶಾಲೆ ಇಂದು ಸಮೃದ್ಧವಾಗಿದೆ. ಯಾರಿಗೆ ಸಾಧಿಸುವ ಛಲ ಮತ್ತು ಆತ್ಮವಿಶ್ವಾಸ ಇದೆಯೋ ಅವರಿಂದ ಈ ಕಾರ್ಯ ಸಾಧ್ಯ. ಈ ನಿಟ್ಟಿನಲ್ಲಿ ಈ ಹಳ್ಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜನರನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು.

ನಿಮ್ಮ ಧೈರ್ಯವನ್ನು ದೇಹದಲ್ಲಿ ಜಾಗೃತಗೊಳಿಸಿ, ರಾಷ್ಟ್ರಕ್ಕಾಗಿ ಬದುಕುವ ಸಂಕಲ್ಪ ಮಾಡಿ, ಜ್ಞಾನಿಗಳಾಗಿ ಮತ್ತು ಧೈರ್ಯಶಾಲಿಗಳಾಗಿ ಎಂದು ಹೇಳಿದ ರಾಜ್ಯಪಾಲರು, ಭಾರತ ಮಾತಾ ಕಿ ಜೈ ಎಂದು ಸಭಾಸದರಲ್ಲಿ ಹೇಳಲು ತಿಳಿಸಿದರು. ಸಭೆಯಲ್ಲಿನ ಜನರ ಧ್ವನಿಗೆ ಉತ್ತೇಜಿತರಾಗಿ ಮೂರು ಬಾರಿ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ಮೊಳಗಿಸಿದದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಮೂಡುನಡುಗೋಡು ಗ್ರಾಮವನ್ನು ಮದ್ಯವ್ಯಸನಮುಕ್ತವಾಗಿಸಲು ಹಾಗೂ ಆದರ್ಶ ಗ್ರಾಮವಾಗಿಸಲು ರಾಜ್ಯಪಾಲರ ಸೂಚನೆಯಂತೆ ಕಾರ್ಯಪ್ರವೃತ್ತರಾಗುತ್ತೇವೆ. ಶಾಲೆಯ ಈ ಅಭಿವೃದ್ಧಿ ಕಾರ್ಯ ರಾಜ್ಯಕ್ಕೆ ಸಂದೇಶವನ್ನು ನೀಡುವ ಕೆಲಸ ಮಾಡಿದ್ದು, ದಡ್ಡಲಕಾಡು ಶಾಲೆ ಇತಿಹಾಸ ನಿರ್ಮಿಸಿದೆ. ಶಿಕ್ಷಣದ ಕತ್ತಲು ಬೆಳಗಿಸುವ ಕೆಲಸ ಮಾಡಿದ್ದು, ಕನ್ನಡ ಶಾಲೆಗಳು ಮುಚ್ಚುವ ಪರಿಸ್ಥಿತಿ ಇದ್ದಾಗ ಅದನ್ನು ಉಳಿಸಬಹುದು ಎಂಬ ನಂಬಿಕೆಯನ್ನು ಶಾಲೆ ಮಾಡಿದೆ ಎಂದು ಶ್ಲಾಘಿಸಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಹೈಕೋರ್ಟ್ ನ್ಯಾಯವಾದಿ ರಾಜಶೇಖರ ಹಿಳಿಯೂರು ಮಾತನಾಡಿದರು.

ಈ ಸಂದರ್ಭದಲ್ಲಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್, ಮಂಗಳೂರು ಸಹಾಯಕ ಕಮೀಷನರ್ ರವಿಚಂದ್ರ ನಾಯ್ಕ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಡಿಡಿಪಿಐ ವೈ. ಶಿವರಾಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ತಾಪಂ ಸದಸ್ಯರಾದ ಪದ್ಮಾವತಿ, ಪ್ರಭಾಕರ ಪ್ರಭು, ಪಂಜಿಕಲ್ಲು ಗ್ರಾಪಂ ಅಧ್ಯಕ್ಷೆ ಸುಮಿತ್ರಾ ಯೋಗಿಶ್ ಕುಲಾಲ್, ಉಪಾಧ್ಯಕ್ಷ ಲಕ್ಷ್ಮಿನಾರಾಯಣ ಗೌಡ ಹಾಜರಿದ್ದರು.

ಸರಕಾರಿ ಶಾಲೆ ಉಳಿಸಿ ಬೆಳೆಸಿ-ರಾಜ್ಯ ಸಮಿತಿ ಹಾಗೂ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಪ್ರಾಸ್ತಾವಿಸಿ, ಸ್ವಾಗತಿಸಿದರು. ಪುರುಷೋತ್ತಮ ಅಂಚನ್ ವಂದಿಸಿದರು. ಶಿಕ್ಷಕಿ ಹಿಲ್ಡಾ ಫರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕೆಂದು ಶಾಸನ ಮಾಡುವವರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. ಯಾರಲ್ಲಿ ಹೆಚ್ಚು ಹಣವಿದೆಯೋ ಅವರು ಆಂಗ್ಲ ಮಾಧ್ಯಮ, ಇಲ್ಲದವರು ಸರಕಾರಿ ಶಾಲೆಗಳಲ್ಲಿ ಕಲಿಯುವ ಪರಿಸ್ಥಿತಿ. ಆದರೆ, ಇದು ಬದಲಾಗಬೇಕಾದರೆ ನೀವು ಎಲ್ಲದಕ್ಕೂ ಹೂಂ ಗುಟ್ಟುವುದನ್ನು ಬಿಡಬೇಕು. ಗಟ್ಟಿ ಧ್ವನಿಯಲ್ಲಿ ನಿಮಗೇನು ಬೇಕೋ ಅದನ್ನು ಆಗ್ರಹಿಸಿ. ಅಂತಿಮವಾಗಿ ಜನಾಗ್ರಹವನ್ನೇ ಸರಕಾರ ಶಾಸನ ಮಾಡುತ್ತದೆ.

-ವಜೂಭಾಯಿ ರುಢಾಭಾಯಿವಾಲಾ, ರಾಜ್ಯಪಾಲ 

ಗ್ರಾಮೀಣದ ಮಕ್ಕಳೇ ಮುಂದು

ಇಂದು ಪಟ್ಟಣದ ವಿದ್ಯಾರ್ಥಿಗಳಿಗಿಂತ ಕಂಪ್ಯೂಟರ್ ನಂಥಾ ತಂತ್ರಜ್ಞಾನದ ಕಲಿಯುವಿಕೆಯಲ್ಲಿ ಹಳ್ಳಿಯ ವಿದ್ಯಾರ್ಥಿಗಳು ಮುಂದಿರುತ್ತಾರೆ. ಗ್ರಾಮೀಣ ವಿದ್ಯಾರ್ಥಿಗಳು ಜ್ಞಾನಸಂಪನ್ನರು. ಆದರೆ, ಅವರಿಗೆ ಕಲಿಯುವ ಅವಕಾಶ ಬೇಕು. ಅತ್ಯಂತ ಶಿಸ್ತಿನಿಂದ ಕಲಿಯುವ ಮಕ್ಕಳು ಹಳ್ಳಿಯ ವಿದ್ಯಾರ್ಥಿಗಳು. ಮಂಗಳೂರಿನಲ್ಲಿ ಇಂದು ಉತ್ತಮ ಕೆಲಸಕಾರ್ಯಗಳನ್ನು ನಿರ್ವಹಿಸುತ್ತಿರುವ ಪಟ್ಟಣವಾಸಿಗಳ ಪೂರ್ವಜರು ಹಳ್ಳಿಯಲ್ಲೇ ಕಲಿತವರು. ಉತ್ತಮ ಶಿಕ್ಷಣದಿಂದ ಇದು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಬಾಲಕ, ಬಾಲಕಿಗೂ ಅವರಿಗಿರುವ ಬುದ್ಧಿಶಕ್ತಿಯನ್ನು ಉಪಯೋಗಿಸಲು ವಿದ್ಯೆಯನ್ನು ಒದಗಿಸಲು ಪ್ರಯತ್ನಶೀಲರಾಗಬೇಕು. ವಿದ್ಯಾದಾನಕ್ಕೆ ಪ್ರೋತ್ಸಾಹವೂ ಬೇಕು ಎಂದು ರಾಜ್ಯಪಾಲರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News