×
Ad

ಮೀನುಗಾರರ ಶೋಧಕ್ಕಾಗಿ ಐದು ತಂಡ ರಚನೆ: ಐಜಿಪಿ

Update: 2019-01-05 19:56 IST

ಮಲ್ಪೆ, ಜ.5: ನಾಪತ್ತೆಯಾಗಿರುವ ಮೀನುಗಾರರ ಪತ್ತೆ ಕಾರ್ಯ ಚುರುಕು ಗೊಳಿಸಲಾಗಿದ್ದು, ಅದಕ್ಕಾಗಿ ಐದು ತಂಡಗಳನ್ನು ರಚಿಸಲಾಗಿದೆ. ಪೊಲೀಸ್ ಇಲಾಖೆಯ ಎರಡು ತಂಡಗಳು ಮಹಾರಾಷ್ಟ್ರದಲ್ಲೇ ಬೀಡು ಬಿಟ್ಟಿವೆ ಎಂದು ಮಂಗಳೂರು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ತಿಳಿಸಿದ್ದಾರೆ.

ನಾಪತ್ತೆಯಾದ ಮೀನುಗಾರರಾದ ಚಂದ್ರಶೇಖರ್ ಕೋಟ್ಯಾನ್ ಹಾಗೂ ದಾಮೋದರ್ ಸಾಲ್ಯಾನ್ ಅವರ ಬಡಾನಿಡಿಯೂರು ಗ್ರಾಮದ ಪಾವಂಜಿಗುಡ್ಡೆ ಎಂಬಲ್ಲಿರುವ ಮನೆಗಳಿಗೆ ಇಂದು ಭೇಟಿ ನೀಡಿದ ಅವರು ಮನೆಯವರಿಗೆ ಸಾಂತ್ವನ ಹೇಳಿ ಈ ಕುರಿತು ಮಾಹಿತಿ ನೀಡಿದರು.

ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್, ಡಿಸಿಐಬಿ ನಿರೀಕ್ಷಕ ಕಿರಣ್, ಕರಾವಳಿ ಕಾವಲು ಪಡೆ ಹಾಗೂ ಕೋಸ್ಟ್‌ಗಾರ್ಡ್ ಹಾಗೂ ನೌಕಪಡೆಯ ತಂಡಗಳು ಮೀನುಗಾರರ ಹುಡು ಕಾಟದಲ್ಲಿ ತೊಡಗಿಸಿಕೊಂಡಿವೆ. ರತ್ನಗಿರಿ, ದೇವಗಡ ಸೇರಿದಂತೆ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ವಿವಿಧೆಡೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದರು.

ಮೀನುಗಾರರು ನಾಪತ್ತೆಯಾಗಿರುವ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ದಿನದಿಂದ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ನಮ್ಮಿಂದ ಯಾವುದೇ ವಿಳಂಬ ಆಗಿಲ್ಲ. ಸರಕಾರವು ಉನ್ನತ ಮಟ್ಟದಲ್ಲಿ ತನಿಖೆ ನಡೆಸು ತ್ತಿದೆ. ಎಲ್ಲರನ್ನು ಹುಡುಕಿ ತರುವ ವಿಶ್ವಾಸ ನಮಗಿದೆ ಎಂದು ಐಜಿಪಿ ಅರುಣ್ ಚಕ್ರವರ್ತಿ ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ಡಿವೈಎಸ್ಪಿ ಜೈಶಂಕರ್, ಮಲ್ಪೆ ಪೊಲೀಸ್ ಉಪ ನಿರೀಕ್ಷಕ ಮಧು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News