ಕಣ್ಮರೆಯಾಗಿರುವ ಮೀನುಗಾರರ ಮನೆ ಪರಿಸರದಲ್ಲಿ ನೀರವ ಮೌನ
ಉಡುಪಿ, ಜ.5: ಮಲ್ಪೆಯಿಂದ ಮೀನುಗಾರಿಕೆ ತೆರಳಿದ್ದ ವೇಳೆ ಬೋಟು ಸಹಿತ ಏಳು ಮಂದಿ ಮೀನುಗಾರರು ನಾಪತ್ತೆಯಾಗಿ ಇಂದಿಗೆ 22 ದಿನಗಳಾಗಿದ್ದು, ಕಣ್ಮರೆಯಾಗಿರುವ ಬೋಟು ಮಾಲಕ ಚಂದ್ರಶೇಖರ್ ಸಾಲ್ಯಾನ್ ಹಾಗೂ ಎರಡನೆ ಬೋಟು ಚಾಲಕ ದಾಮೋದರ್ ಕೋಟ್ಯಾನ್ ಅವರ ಬಡಾನಿಡಿಯೂರು ಗ್ರಾಮದ ಪಾವಂಜಿಗುಡ್ಡೆಯ ಮನೆ ಪರಿಸರದಲ್ಲಿ ನೀರವ ಮೌನ ಆವರಿಸಿದೆ. ಕಣ್ಮರೆಯಾಗಿರುವ ಮಕ್ಕಳ ಬರುವಿಕೆಗಾಗಿ ಮನೆ ಮಂದಿ ಪ್ರತಿದಿನ ಕಣ್ಣೀರು ಸುರಿಸುತ್ತ ಎದುರು ನೋಡುತ್ತಿದ್ದಾರೆ.
ಮಲ್ಪೆ ತೊಟ್ಟಂ ಮೂಲದ ಚಂದ್ರಶೇಖರ್ ಕೋಟ್ಯಾನ್ ಒಂದೂವರೆ ವರ್ಷದ ಹಿಂದೆ ಪಾವಂಜಿಗುಡ್ಡೆಯಲ್ಲಿ ಜಾಗ ಖರೀದಿಸಿ ಹೊಸ ಮನೆ ನಿರ್ಮಿಸಿದ್ದರು. 10 ವರ್ಷಗಳ ಹಿಂದೆ ಶ್ಯಾಮಲಾ ಅವರನ್ನು ವಿವಾಹವಾಗಿರುವ ಇವರಿಗೆ ಮಕ್ಕಳಿಲ್ಲ. ಚಂದ್ರಶೇಖರ್ ಕೋಟ್ಯಾನ್ ಎರಡು ವರ್ಷಗಳ ಹಿಂದೆ ಸುವರ್ಣ ತ್ರಿಭುಜ ಬೋಟನ್ನು ಖರೀದಿಸಿದ್ದು, ಅದರ ದುರಸ್ತಿ ಹಾಗೂ ಪೂಜೆ ನೆರವೇರಿಸಿದ ಬಳಿಕ ಡಿ.13ರಂದು ಮೊದಲ ಬಾರಿಗೆ ಬೋಟನ್ನು ಸಮುದ್ರಕ್ಕೆ ಇಳಿಸಿ ಮೀನುಗಾರಿಕೆಗೆ ಹೊರಟಿದ್ದರು. ಅಂದು ಹೋವರ ಸುಳಿವು ಈವರೆಗೆ ಇಲ್ಲವಾಗಿದೆ.
ಇವರ ಮನೆ ಹತ್ತಿರದಲ್ಲೇ ದಾಮೋದರ್ ಸಾಲ್ಯಾನ್ ಮನೆ ಇದ್ದು, ಇವರ ಇಡೀ ಕುಟುಂಬ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದೆ. ಸುವರ್ಣ ತಿಂಗಳಾಯ ಹಾಗೂ ಸೀತಾ ಸಾಲ್ಯಾನ್ ದಂಪತಿ ಪುತ್ರರಾಗಿರುವ ದಾಮೋದರ್ ಐದು ವರ್ಷಗಳ ಹಿಂದೆ ಮೋಹಿನಿ ಅವರನ್ನು ವಿವಾಹವಾಗಿದ್ದರು. ಇವರಿಗೂ ಮಕ್ಕಳಿಲ್ಲ. ಅನಾರೋಗ್ಯ ಪೀಡಿತ ತಂದೆ ಹಾಗೂ ಮಗನ ನಾಪತ್ತೆಯಿಂದ ಸೊರಗಿ ಹಾಸಿಗೆ ಹಿಡಿದಿರುವ ತಾಯಿ, ಪತಿಯ ಬರುವಿಕೆಗಾಗಿ ಪ್ರತಿಕ್ಷಣವೂ ಕಣ್ಣೀರಿನ ಕೋಡಿ ಹರಿಸುತ್ತಿರುವ ಪತ್ನಿಯಿಂದ ಇಡೀ ಮನೆಯಲ್ಲಿ ನೋವಿನ ಛಾಯೆ ಆವರಿಸಿದೆ.
ಈವರೆಗೆ ಬೇರೆಯವರ ಬೋಟಿನಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದ ದಾಮೋದರ್ ಸಾಲ್ಯಾನ್ ಡಿ.13ರಂದು ಮೊದಲ ಬಾರಿಗೆ ಚಂದ್ರಶೇಖರ್ ಕೋಟ್ಯಾನ್‌ರ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಕಡಲ ಮಕ್ಕಳಿಬ್ಬರ ಕಣ್ಮರೆಯಿಂದ ಇಡೀ ಪರಿಸರದಲ್ಲಿ ಆತಂಕ ಮಡುಗಟ್ಟಿದೆ. ಕುಟುಂಬದವರು ಹಾಗೂ ನೆರೆಮನೆಯವರು ಈ ಇಬ್ಬರ ಮನೆಗೆ ಆಗಮಿಸಿ ಸಾಂತ್ವಾನ ಹೇಳುತ್ತಿದ್ದಾರೆ. ಮನೆಗೆ ಬರುವ ಗಣ್ಯರಲ್ಲಿ ಮಕ್ಕಳನ್ನು ಹುಡುಕಿಕೊಡಿ ಎಂದು ಮನೆ ಮಂದಿ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.
‘ಪ್ರತಿಬಾರಿ ಆಳಸಮುದ್ರ ಮೀನುಗಾರಿಕೆಗೆ ತೆರಳುವ ಇವರು, 10 ದಿನಗಳ ಕಾಲ ಮೀನುಗಾರಿಕೆ ನಡೆಸಿ ವಾಪಾಸ್ಸಾಗುತ್ತಾರೆ. ದಾಮೋದರ್ ಸಾಲ್ಯಾನ್ ಮನೆಯಿಂದ ಹೊರಟ ನಂತರ ನಮಗೆ ಯಾವುದೇ ಪೋನ್ ಕರೆ ಮಾಡಿಲ್ಲ. ನಮ್ಮ ತಂದೆ, ನಾನು, ಸಹೋದರ ಎಲ್ಲರು ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿ ಕೊಂಡಿದ್ದೇವೆ. ಅವರೆಲ್ಲ ಸುರಕ್ಷಿತವಾಗಿ ಬರುವ ವಿಶ್ವಾಸ ನಮಗೆ ಇದೆ’
-ಪ್ರಮೋದ್ ಸಾಲ್ಯಾನ್, ದಾಮೋದರ್ ಸಾಲ್ಯಾನ್‌ರ ಸಹೋದರ
‘ಈಗಾಗಲೇ ವಿಳಂಬ ಆಗಿದೆ. ಇನ್ನಾದರೂ ಸರಕಾರಗಳು ಕಾರ್ಯಪ್ರವೃತ್ತವಾಗಿ ನಮ್ಮವರನ್ನು ಹುಡುಕಿಕೊಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಒತ್ತಡ ಹಾಕಬೇಕು. ಅವರೆಲ್ಲ ಜೀವಂತ ಇದ್ದಾರೆ ಎಂಬ ಬಗ್ಗೆ ನಮಗೆ 100ಕ್ಕೆ 100 ವಿಶ್ವಾಸ ಇದೆ. ಈಗ ಇರುವ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಅವರನ್ನು ಹುಡುಕಿ ತರುವ ಕೆಲಸವನ್ನು ಸರಕಾರ ಮಾಡಬೇಕು. ಆದಷ್ಟು ಬೇಗ ಅವರೆಲ್ಲ ಸುರಕ್ಷಿತವಾಗಿ ಬರಲಿ’
- ರಮೇಶ್, ಚಂದ್ರಶೇಖರ್ ಕೋಟ್ಯಾನ್‌ರ ನೆರೆಮನೆಯವರು.